ಹಾವೇರಿ ಉದ್ಯಮಿಗೆ ಬೆಂಗಳೂರಲ್ಲಿ ಹನಿಟ್ರ್ಯಾಪ್ …!ಹಾವೇರಿ ಉದ್ಯಮಿಗೆ ಬೆಂಗಳೂರಲ್ಲಿ ಹನಿಟ್ರ್ಯಾಪ್ … !
ಹಾವೇರಿ: ಉದ್ಯಮದಲ್ಲಿ ₹25 ಲಕ್ಷ ಹೂಡಿಕೆ ಮಾಡಿ, ಪ್ರತಿ ತಿಂಗಳು ₹50 ಸಾವಿರ ಲಾಭ ನೀಡುವಂತೆ ಹೇಳಿ ಹಾವೇರಿಯ ಉದ್ಯಮಿಯೊಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡು, ಬಳಿಕ ಹನಿಟ್ರ್ಯಾಪ್ ಮಾದರಿಯಲ್ಲಿ ಸಿಲುಕಿಸಿ ₹2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 29 ರಂದು ಅಪರಾಧ ಸಂಖ್ಯೆ /2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 308(2)ರ ಪ್ರಕಾರ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದ ಜಾಹೀರಾತಿನಿಂದ ಪರಿಚಯ:
ಹಾವೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಂಪನಿ ನಡೆಸುತ್ತಿರುವ ಉದ್ಯಮಿಯೊಬ್ಬರು ಕೆಲಸಗಾರರ ಅಗತ್ಯಕ್ಕಾಗಿ ಸುಮಾರು ನಾಲ್ಕು ತಿಂಗಳ ಹಿಂದೆ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದರು. ಈ ಮೂಲಕ ಪರಿಚಯವಾದ ಬೆಂಗಳೂರಿನ ಮಹಿಳೆ, ಉದ್ಯಮಿಗೆ ಕರೆ ಮಾಡಿ ಸಂಪರ್ಕದಲ್ಲಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಕಂಪನಿಯಲ್ಲಿ ₹25 ಲಕ್ಷ ಹೂಡಿಕೆ ಮಾಡಿ, ತಿಂಗಳಿಗೆ ₹50 ಸಾವಿರ ಲಾಭ ನೀಡುವಂತೆ ಮಹಿಳೆ ಪ್ರಸ್ತಾಪಿಸಿದ್ದು, ಉದ್ಯಮಿಯೂ ಇದಕ್ಕೆ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಬೆಂಗಳೂರಿಗೆ ಕರೆಸಿ ಬೆದರಿಕೆ ಆರೋಪ:
ವ್ಯವಹಾರದ ಕುರಿತು ಚರ್ಚಿಸಲು ಅಕ್ಟೋಬರ್ 28ರಂದು ಬೆಂಗಳೂರಿಗೆ ಬರುವಂತೆ ಮಹಿಳೆ ತಿಳಿಸಿದ್ದಾಳೆ. ಅದರಂತೆ ಬೆಂಗಳೂರಿಗೆ ತೆರಳಿದ್ದ ಹಾವೇರಿ ಯ ಪ್ರಭಾವಿ ಉದ್ಯಮಿಯನ್ನು ಸಂಜೆ ರಾಜರಾಜೇಶ್ವರಿ ನಗರದ ಆಲ್ಬೆಕ್ ಹೋಟೆಲ್ ಸಮೀಪಕ್ಕೆ ಕರೆಸಿಕೊಂಡು, ಸಮೀಪದ ಮನೆಯೊಂದಕ್ಕೆ ಕರೆದೊಯ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಮಹಿಳೆ ಹಾಗೂ 6ರಿಂದ 7 ಮಂದಿ ಪುರುಷರು ಇತರರು ಸೇರಿಕೊಂಡು ಉದ್ಯಮಿಯನ್ನು ಅರೆಬೆತ್ತಲೆಗೊಳಿಸಿ, ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ನಂತರ ಮಹಿಳೆಯನ್ನು ಮದುವೆಯಾಗಬೇಕು, ಇಲ್ಲದಿದ್ದರೆ ₹2 ಕೋಟಿ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ಉದ್ಯಮಿಯ ಬಲಗೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಕಿತ್ತುಕೊಂಡಿದ್ದಾರೆ ಎಂಬ ಆರೋಪವೂ ದೂರಿನಲ್ಲಿದೆ.
ಸ್ನೇಹಿತರ ಸಲಹೆಯಂತೆ ಪೊಲೀಸ್ ಠಾಣೆಗೆ ದೂರು
ಘಟನೆಯ ಬಳಿಕ ಉದ್ಯಮಿಯ ಪರಿಚಯದ ವ್ಯಕ್ತಿಯೊಬ್ಬರು ಸ್ಥಳಕ್ಕೆ ಬಂದು ಸಹಾಯ ಮಾಡಿದ್ದು, ನಂತರ ಅವರನ್ನು ಮನೆಗೆ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಮರುದಿನ ಸ್ನೇಹಿತರೊಂದಿಗೆ ಘಟನೆ ಕುರಿತು ಚರ್ಚಿಸಿದಾಗ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಪೊಲೀಸ್ ತನಿಖೆ ಆರಂಭ:
ದೂರಿನ ಆಧಾರದ ಮೇಲೆ ಮಹಿಳೆ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ದೂರುದಾರರು ಮಾಡಿರುವ ಆರೋಪಗಳು ತನಿಖೆಯಿಂದ ದೃಢಪಡಬೇಕಿದ್ದು, ಆರೋಪಿಗಳ ಕೃತ್ಯ ಹಾಗೂ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಇಂತಹ ಹಲವಾರು ವಂಚನೆಯ ಘಟನೆಗಳು, ಹನಿಟ್ಯ್ರಾಫ್ ನಂತ ಘಟನೆಗಳು ನಡೆಯುತ್ತಿದ್ದು ಉದ್ಯೋಗ ಮತ್ತು ಉದ್ಯಮದಲ್ಲಿ ಹೂಡಿಕೆಯ ಆಮಿಷವೊಡ್ಡಿ ಅಪರಿಚಿತರನ್ನು ಸಂಪರ್ಕಿಸುವ ಇಂತಹ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ.

