
ಆಶ್ರಯ ಮನೆಗಳ ಹಂಚಿಕೆ ಕನಸು ನನಸಾಗಿದೆ: ಸಚಿವ ರುದ್ರಪ್ಪ ಲಮಾಣಿ
ಹಾವೇರಿ ನಗರದ ನಾಗೇಂದ್ರನಮಟ್ಟಿಯಲ್ಲಿ ನಿರ್ಮಿಸಲಾಗುತ್ತಿರುವ ಜಿ+1 ಮಾದರಿಯ ಆಶ್ರಯ ಮನೆಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸ್ವಂತ ಸೂರು ಒದಗಿಸಲಿವೆ. ಮನೆಗಳ ಹಂಚಿಕೆ ನನ್ನ ಕನಸಿನ ಯೋಜನೆಯಾಗಿದ್ದು, ಫಲಾನುಭವಿಗಳ ಸಹಕಾರದಿಂದ ಇಂದು ಅದು ನನಸಾಗಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಶ್ರಯ ಮನೆಗಳ ಫಲಾನುಭವಿಗಳನ್ನು ಪಾರದರ್ಶಕವಾಗಿ ಲಾಟರಿ ಮೂಲಕ ಆಯ್ಕೆ ಮಾಡಿ ಮಾತನಾಡಿದ ಅವರು, ನಾಗೇಂದ್ರನಮಟ್ಟಿಯಲ್ಲಿ ಒಟ್ಟು 400 ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲು ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ 256 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಶೀಘ್ರದಲ್ಲೇ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ಸಚಿವರ ಸಮ್ಮುಖದಲ್ಲಿ ಹಂಚಿಕೆ ಮಾಡಲಾಗುವುದು ಎಂದರು.
ಮನೆ ಪಡೆಯಲು ಅಗತ್ಯವಿರುವ ಸಂಪೂರ್ಣ ವಂತಿಕೆಯನ್ನು ಪಾವತಿಸಿದ ಇಬ್ಬರು ಫಲಾನುಭವಿಗಳನ್ನು ಸಚಿವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಆಶ್ರಯ ಮನೆಗಳ ನಿರ್ಮಾಣ ಮತ್ತು ಹಂಚಿಕೆಯ ಜೊತೆಗೆ, ಮುಂದಿನ ದಿನಗಳಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿ, ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ಜಗಧೀಶ ಬೇಟಗೇರಿ ಅವರು ಮಾತನಾಡಿ ಲಾಟರಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮನೆಗಳು ಅರ್ಹ ಕುಟುಂಬಗಳಿಗೆ ತಲುಪುವಂತೆ ಕ್ರಮ ವಹಿಸಲಾಗಿದೆ ಫಲಾನುಭವಿಗಳು ಮನೆಗಳ ಹಂಚಿಕೆ ಪ್ರಕ್ರಿಯೆಗೆ ಸಹಕರಿಸಿದ್ದು, ತಮ್ಮದೇ ಆದ ಮನೆಯನ್ನು ಪಡೆಯುವ ನಿರೀಕ್ಷೆಯಿಂದ ಸಂತಸ ಹೊಂದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಜಗದೀಶ ಬೇಟಗೇರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ವೆಂಕಟೇಶ ಬಿಜಾಪೂರ, ದ್ಯಾಮಣ್ಣ ಅರಸನಾಳ, ಜಾಫರ ಅತ್ತಾರ, ನಗರಸಭೆ ಆಯುಕ್ತ ಕಾಂತರಾಜು ಸೇರಿದಂತೆ ಆಶ್ರಯ ಸಮಿತಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

