
ರಾಜ್ಯ ಸರಕಾರ ಬೆಲೆ ಏರಿಕೆಗೆ ತಕ್ಕಂತೆ ವೈಜ್ಞಾನಿಕ ಕನಿಷ್ಠ ವೇತನ ಜಾರಿಗೊಳಿಸಬೇಕು: ಬಸವರಾಜ ಪೂಜಾರ
ಹಾವೇರಿ: ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ, ಇಂದಿನ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಎಲ್ಲಾ ಕಾರ್ಮಿಕರಿಗೆ ಸರಾಸರಿ ರೂ. ೩೬,೦೦೦ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದರು.
ಶನಿವಾರ ನಗರದ ಹೊರವಲಯದಲ್ಲಿರುವ ಜಿಲ್ಲಾಡಳಿತ ಭವನದ ಎದುರು ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಕಾರ್ಮಿಕರ ನಿರಂತರ ಹೋರಾಟದ ಫಲವಾಗಿ ಪ್ರತಿ ಉದ್ದಿಮೆಗೆ ಪ್ರತ್ಯೇಕವಾಗಿ ಕನಿಷ್ಠ ವೇತನ ಅಧಿಸೂಚನೆ ಹೊರಡಿಸದೇ ಬಹುತೇಕ ಉದ್ದಿಮೆಗಳಿಗೆ ಏಕರೂಪವಾಗಿ ಹಾಗೂ ಹಿಂದೆ ಇದ್ದ ನಾಲ್ಕು ವಲಯಕ್ಕೆ ಬದಲಾಗಿ ಮೂರು ವಲಯಗಳಾಗಿ ಮಾಡಿ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಮೇ ೨೨ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಕನಿಷ್ಟ ವೇತನ ಅಧಿಸೂಚನೆ ಸ್ವಾಗತರ್ಹವಾಗಿದ್ದು, ಬೆಲೆ ಏರಿಕೆ ಸೇರಿದಂತೆ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಲಕ್ಷಾಂತರ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದರು.
ಕನಿಷ್ಟ ವೇತನ ಅಧಿಸೂಚನೆಯಿಂದ ಹೊರಗಿಟ್ಟಿರುವ ಬಹುತೇಕ ಲಕ್ಷಾಂತರ ಬಡ ಮಹಿಳೆಯರಿರುವ ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಕೈಮಗ್ಗ ಮುಂತಾದ ೧೯ ಉದ್ದಿಮೆಗಳಲ್ಲಿಯ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಈ ಉದ್ದಿಮೆಗಳಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿ ಮಾಡಿ ಅಧಿಸೂಚನೆ ಹೊರಡಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರ, ಲೋಡಿಂಗ್ ಅನ್ ಲೋಡಿಂಗ್ (ಹಮಾಲಿ) ಸೇರಿದಂತೆ ತುಂಡು ಕೆಲಸ (ಪೀಸ್ ವರ್ಕ್) ಸ್ವರೂಪದ ಶ್ರಮಿಕ ಪ್ರಾಧಾನ್ಯ ಉದ್ದಿಮೆಗಳಿಗೆ ಪರಿಷ್ಕರಣೆ ಮಾಡಲಾಗುವುದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಅದಕ್ಕೆ ಯಾವುದೇ ಕಾಲಮಿತಿ ನಿಗದಿ ಮಾಡಿಲ್ಲ. ಕೂಡಲೇ ಈ ಕಾರ್ಮಿಕರಿಗೂ ಪರಿಷ್ಕೃತ ಕನಿಷ್ಟ ವೇತನ ನಿಗದಿಮಾಡಬೇಕು ಹಾಗೂ ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಸ್ಕೀಂ ನೌಕರರನ್ನು ಕನಿಷ್ಟ ವೇತನ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕರಾದ ಅಂದಾನೆಪ್ಪ ಹೆಬಸೂರು ಮಾತನಾಡಿ, ರಾಜ್ಯ ಸರ್ಕಾರ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದ ದಿನಾಂಕವಾದ ೨೦೨೫ ಏಪ್ರಿಲ್ ೧೧ ರಿಂದಲೇ ಪೂರ್ವಾನ್ವಯಿಸಿ ಕನಿಷ್ಠ ವೇತನ ಜಾರಿಗೆ ತರಬೇಕು. ಒಂದು ವರ್ಷದ ಅರಿಯರ್ಸ್ ಕಾರ್ಮಿಕರಿಗೆ ನೀಡಬೇಕು. ಮಾಲೀಕರ ಯಾವುದೇ ಒತ್ತಡಕ್ಕೆ ಮಣಿಯದೆ ಈ ಪರಿಷ್ಕೃತ ಕನಿಷ್ಠ ವೇತನದ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.ಕಾರ್ಮಿಕ ಸಂಹಿತೆಗಳಿಗೆ ರಾಜ್ಯ ಸರಕಾರ ಕಾರ್ಮಿಕರ ಪರ ತಿದ್ದುಪಡಿಗಳನ್ನು ತಂದು ನಂತರ ನಿಯಮಗಳನ್ನು ರೂಪಿಸಬೇಕು. ಖಾಯಂಯೇತರ ಕಾರ್ಮಿಕರ ಖಾಯಂ ಮಾಡಿಕೊಳ್ಳಲು ಅಗತ್ಯ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.
ಗ್ರಾಮ ಪಂಚಾಯತಿ ನೌಕರ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ ಮಾತನಾಡಿ, ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಗ್ರಾಮ ಪಂಚಾಯತಿ ನೌಕರರ ಹಲವಾರು ಸಮಸ್ಯೆಗಳು ಇಂದಿಗೂ ಪರಿಹಾರ ಕಂಡಿಲ್ಲ. ಕೂಡಲೇ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟಮೆಯ ಸ್ಥಳಕ್ಕಾಗಮಿಸಿದ ತಹಸೀಲ್ದಾರರಾದ ಅಮೃತಗೌಡ ಪಾಟೀಲ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ರೇಖಾ ಡೊಳ್ಳಿನ ಹಾಗೂ ಜಿ.ಪಂ ಅಧಿಕಾರಿ ಐ.ಎಂ ಮುಲ್ಲಾ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತಿ ನೌಕರ ಸಂಘದ ಜಿಲ್ಲಾ ಮುಖಂಡರಾದ ಫಕ್ಕಿರೇಶ ಹಕ್ಕಿಮರೆಣ್ಣನವರ, ಮಂಜು ರಟ್ಟಿಹಳ್ಳಿ, ಆಂಜನೇಯ ನಾಗಣ್ಣನವರ, ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡರಾದ ಚನವೀರಯ್ಯ ಹಿರೇಮಠ, ರಿಯಾಜ್ ಅಹಮದ್ ಮರಫಾಜಿ, ರಿಯಾಜ್ ಕೋಟೇನವರ, ಸಾಬೀರ ಕಡಕೋಳ, ಸ್ವಚ್ಛವಾಹಿನಿ ಕಾರ್ಮಿಕ ಮುಖಂಡರಾದ ಗಾಯತ್ರಿ ಬಲ್ಮುರಿ, ಮಮತಾ ಆನವಟ್ಟಿ, ಲತಾ ಯಲಗಚ್ಚ, ದೀಪಾ ಶಿರಗಂಬಿ, ಶೋಭಾ ಬೂದಗಟ್ಟಿ ಸೇರಿದಂತೆ ಗ್ರಾಮ ಪಂಚಾಯತಿ ನೌಕರರು, ಸ್ವಚ್ಛವಾಹಿನಿ ಸಿಬ್ಬಂದಿ ಹಾಗೂ ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.

