
ಸಹಕಾರಿ ಕ್ಷೇತ್ರದ ಸಾಧನೆಗೆ ದಾಕ್ಷಾಯಣಿ ಗಾಣಿಗೇರ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ
ಪ್ರಿಯದರ್ಶಿನಿ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷೆಗೆ ರಾಜ್ಯಮಟ್ಟದ ಗೌರವ
ಹಾವೇರಿ: ರಾಜ್ಯ ಸರ್ಕಾರ ನೀಡುವ 2026ನೇ ಸಾಲಿನ ಪ್ರತಿಷ್ಠಿತ ‘ಸಹಕಾರಿ ರತ್ನ’ ಪ್ರಶಸ್ತಿಗೆ ಹಾವೇರಿಯ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅವರು ಆಯ್ಕೆಯಾಗಿದ್ದಾರೆ. ನ.14ರಂದು ಬೆಂಗಳೂರಿನಲ್ಲಿ ನಡೆಯುವ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಕಾಲದಿಂದ ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ, ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ನೀಡಿರುವ ಕೊಡುಗೆ ಹಾಗೂ ಸಹಕಾರಿ ಚಳವಳಿಯ ಬಲವರ್ಧನೆಗೆ ಶ್ರಮಿಸಿರುವುದನ್ನು ಪರಿಗಣಿಸಿ ರಾಜ್ಯ ಸರ್ಕಾರ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಹಾವೇರಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಕಾರ್ಯವೈಖರಿ ಹಾಗೂ ಸೇವಾ ಮನೋಭಾವದಿಂದ ಗುರುತಿಸಿಕೊಂಡಿರುವ ದಾಕ್ಷಾಯಣಿ ಗಾಣಿಗೇರ ಅವರಿಗೆ ರಾಜ್ಯಮಟ್ಟದ ಗೌರವ ಲಭಿಸಿರುವುದು ಜಿಲ್ಲೆಯ ಮಹಿಳಾ ವಲಯ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಂತಸ ಮತ್ತು ಹೆಮ್ಮೆಗೆ ಕಾರಣವಾಗಿದೆ. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರಿಯದರ್ಶಿನಿ ಕೊಡುಗೆ
ಹಾವೇರಿ ನಗರವನ್ನು ಯಾಲಕ್ಕಿ ಕಂಪಿನನಗರ ಎಂದೇ ಗುರುತಿಸಲಾಗುತ್ತದೆ. ಇಲ್ಲಿನ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಸದುದ್ದೇಶದಿಂದ 1998ರಲ್ಲಿ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಲಾಯಿತು.
ಕೇವಲ ₹7 ಲಕ್ಷ ಆರಂಭಿಕ ಬಂಡವಾಳದೊಂದಿಗೆ ಪ್ರಾರಂಭವಾದ ಬ್ಯಾಂಕ್, ಆಡಳಿತ ಮಂಡಳಿಯ ಪರಿಶ್ರಮ, ಕಾರ್ಯತತ್ಪರತೆ ಹಾಗೂ ಗ್ರಾಹಕರ ವಿಶ್ವಾಸದಿಂದ ಹಂತ ಹಂತವಾಗಿ ಬೆಳವಣಿಗೆ ಸಾಧಿಸಿದೆ. ಪ್ರಸ್ತುತ ₹26 ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹಾಗೂ ₹40 ಕೋಟಿಗೂ ಅಧಿಕ ವಹಿವಾಟು ಹೊಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾನ್ಯತೆ ಪಡೆದ ಜಿಲ್ಲೆಯ ಏಕೈಕ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಮಹಿಳಾ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ತತ್ವ, ಸಿದ್ಧಾಂತ ಹಾಗೂ ಸೇವಾ ಬದ್ಧತೆಯಿಂದ ಗುರುತಿಸಿಕೊಂಡಿರುವ ಬ್ಯಾಂಕ್, ಎಲ್ಲ ವರ್ಗದ ಜನರಿಗೆ ಪ್ರಾಮಾಣಿಕತೆ, ನಿಷ್ಠೆ ಮತ್ತು ಸೇವಾ ಮನೋಭಾವದಿಂದ ಆರ್ಥಿಕ ಸೇವೆ ಒದಗಿಸುತ್ತ ಬಂದಿದೆ. 25ಕ್ಕೂ ಹೆಚ್ಚು ವರ್ಷಗಳ ಸಾರ್ಥಕ ಸೇವೆಯ ಮೂಲಕ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
ಬ್ಯಾಂಕಿನ ಅಭಿವೃದ್ಧಿ, ಆಡಳಿತಾತ್ಮಕ ದಕ್ಷತೆ ಹಾಗೂ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುವಲ್ಲಿ ಅಧ್ಯಕ್ಷೆ ದಾಕ್ಷಾಯಣಿ ಗಾಣಿಗೇರ ಅವರ ಪಾತ್ರ ಮಹತ್ವದ್ದಾಗಿದೆ. ಇದೀಗ ಅವರಿಗೆ ರಾಜ್ಯಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿ ಲಭಿಸಿರುವುದು ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಸಂತಸವನ್ನು ಇಮ್ಮಡಿಗೊಳಿಸಿದೆ.

