
ಹಾವೇರಿಯಲ್ಲಿ ಹೋಳಿ ಹಬ್ಬದ ನಿಮಿತ್ತ ಮಾರ್ಚ್ ೪ರವರೆಗೆ ವಿಶೇಷ ಕಾರ್ಯಕ್ರಮ
ಹಾವೇರಿ: ‘ಹೋಳಿ ಹಬ್ಬದ ನಿಮಿತ್ತ ನಗರದಲ್ಲಿ ಫೆ. ೨೭ರಿಂದ ಮಾರ್ಚ್ ೪ರವರೆಗೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತಿದೆ’ ಎಂದು ಹೋಳಿ ಆಚರಣಾ ಸಮಿತಿ ಅಧ್ಯಕ್ಷ ವೀರಪ್ಪ ಹೇರೂರ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರತಿ ಕಾಮದೇವ ಸಾಂಸ್ಕೃತಿಕ ಸಂಘ ಹಾಗೂ ವಿವಿಧ ಕಾಮಣ್ಣನ ಸಮಿತಿಗಳ ಸಹಯೋಗದೊಂದಿಗೆ ಅಡ್ಡ ಸೋಗಿನ ಮೆರವಣಿಗೆ, ಓಕಳಿ ಬಂಡಿ, ನಗೆ ಹಬ್ಬದಂತಹ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಬ್ಬವನ್ನು ಯಶಸ್ವಿಗೊಳಿಸಬೇಕು’ ಎಂದರು.
‘ಫೆ. ೨೭ರಂದು ಸಂಜೆ ಕಾಮಣ್ಣನ ಪ್ರತಿಷ್ಠಾಪನೆ ಮಾಡಲಾಗುವುದು. ಫೆ. ೨೮ರಂದು ಸಂಜೆ ೭ ಗಂಟೆಗೆ ಹಾನಗಲ್ ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂದ್ಯಾಗ ಮಲ್ಲಿ ಸಂದ್ಯಾಗ ಗಿಲ್ಲಿ’… ಎಂಬ ಬೆಳದಿಂಗಳ ನಗೆ ಹಬ್ಬ ಜರುಗಲಿದೆ. ‘ಮಾರ್ಚ್ ೨ರಂದು ರಾತ್ರಿ ೭ ಗಂಟೆಗೆ ಸುಭಾಷ್ ವೃತ್ತದಲ್ಲಿ ಜೀವಂತ ಕಾಮಣ್ಣ- ರತಿಯನ್ನು ನಗಿಸುವ ಸ್ಪರ್ಧೆ ಜರುಗಲಿದೆ. ನಂತರ, ಸಂಗೀತಾ ಕಮತಗಿ ಅವರಿಂದ ಜೋಗತಿ ನೃತ್ಯ ನಡೆಯಲಿದೆ. ಮಾ. ೩ರಂದು ಬೆಳಿಗ್ಗೆ ಹಳೇ ಚಾವಡಿ ಬಳಿ ಚಾವಡಿ ಕಾಮಣ್ಣನ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ ೭ ಗಂಟೆಗೆ ಎಂ.ಜಿ. ರಸ್ತೆಯ ಪ್ಯಾಟಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಅಡ್ಡ ಸೋಗಿನ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ’ ಎಂದು ಹೇಳಿದರು.
‘ಪ್ರತಿವರ್ಷದಂತೆ ಈ ವರ್ಷವೂ ಮಾ. ೪ರಂದು ಹರಿಜನ ಕೇರಿಯಿಂದ ಬೆಂಕಿ ಕೆಂಡ ತಂದು, ಕಾಮಣ್ಣನ ದಹನ ಮಾಡಲಾಗುವುದು. ಮಧ್ಯಾಹ್ನ ೧೨ ಗಂಟೆಗೆ ಮುನ್ಸಿಪಲ್ ಹೈಸ್ಕೂಲ್ ರಸ್ತೆಯ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಚೆಡ್ಡಿ ದೋಸ್ತ ಬಳಗದಿಂದ ರೇನ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ’ ಎಂದರು.
ಸಮಿತಿಯ ಉಪಾಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ಮಾತನಾಡಿ, ‘ಇಂದಿನ ಮೊಬೈಲ್ ಯುಗದಲ್ಲಿ ನಮ್ಮ ಆಚರಣೆಗಳು ನಶಿಸಿ ಹೋಗುತ್ತಿವೆ. ಇದೇ ಕಾರಣಕ್ಕೆ ಸೋಗಿನ ಬಂಡಿ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ. ಸೋಗನ್ನು ಹಾಕುವ ಸೋಗಿನ ಬಂಡಿಗಳಿಗೆ ? ೫ ಸಾವಿರ, ಅಡ್ಡ ಸೋಗು ಹಾಕುವ ಪ್ರತಿ ಕಲಾವಿದರಿಗೆ ? ೫೦೦ ಹಾಗೂ ಹೋಳಿ ರಂಗಪAಚಮಿಯAದು ಓಕಳಿ ಬಂಡಿಗೆ ?೩ ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವರಾಜ ಮತ್ತಿಹಳ್ಳಿ, ಬಸವರಾಜ ಜಾಬೀನ, ವಿಜಯಕುಮಾರ ಕೂಡ್ಲಪ್ಪನವರ, ಶಿವಲಿಂಗಪ್ಪ ಕಲ್ಯಾಣಿ, ಕಿರಣ ಕೊಳ್ಳಿ, ಹನುಮಂತಪ್ಪ ತಳವಾರ, ಶಂಭುಲಿAಗ ಹತ್ತಿ, ಕರಬಸಪ್ಪ ಹಲಗಣ್ಣನವರ ಇದ್ದರು.

