
ಕೃಷಿ ಕಡೆಗಣಿಸಿದರೆ ದೇಶವೇ ಸಂಕಷ್ಟ ಎದುರಿಸಬೇಕಾಗುತ್ತದೆ: ರಾಮಣ್ಣ ಕೆಂಚಳ್ಳೆರ
ಹಾವೇರಿ: ಕೃಷಿ ಕ್ಷೇತ್ರವು ಕೇವಲ ಒಂದು ಉದ್ಯೋಗವಲ್ಲ, ಅದು ದೇಶದ ಕೋಟ್ಯಂತರ ಜನರ ಜೀವನಾಡಿಯಾಗಿದೆ. ರೈತರು ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡದಿದ್ದರೆ ಇಡೀ ದೇಶವೇ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ ಹೇಳಿದರು. ಜೂ.೧೦ರಂದು ಬುಧವಾರ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ಹುತಾತ್ಮ ರೈತರ ವೀರಗಲ್ಲಿಗೆ ನಮನ ಸಲ್ಲಿಸಿ ಅವರು ರೈಥರನ್ನು ಉದ್ದೇಶಿಸಿ ಮಾತನಾಡಿದರು.
ರೈತ ಸಂಘದ ಹೋರಾಟ ಹುಡುಗಾಟ ಅಲ್ಲ, ರೈತರು ಒಗ್ಗಟ್ಟಾಗದಿದ್ದರೆ ದೇಶಕ್ಕೆ ಆಪತ್ತು ಕಾದಿದ್ದು. ಸರ್ಕಾರಗಳಿಗೆ ದೇಶದ ಆಹಾರ ಭದ್ರತೆಗೆ ರೈತ ಮಾತ್ರ ಬೇಕಾಗಿದ್ದು, ಖಾಸಗಿ ಕಂಪನಿಗಳು ಇಂದು ಮಾರುಕಟ್ಟೆಯನ್ನು ಆಳುತ್ತಿವೆ. ಬಿತ್ತನೆ ಬೀಜಗಳ ಬೆಲೆ ದುಪ್ಪಟ್ಟಾಗುತ್ತಿದ್ದು, ಕಾಂಪ್ಲೆಕ್ಸ್ ಗೊಬ್ಬರಕ್ಕೆ ಕಾಳಸಂತೆಯಲ್ಲಿ ತಮಗಿಷ್ಟವಾದ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ಒಗ್ಗಟ್ಟಾಗಿ ಇದರ ವಿರುದ್ಧ ಧ್ವನಿ ಎತ್ತದಿದ್ದರೆ, ಮುಂದಿನ ದಿನಗಳಲ್ಲಿ ಕೃಷಿಯ ನಿಯಂತ್ರಣ ಸಂಪೂರ್ಣ ಕಾರ್ಪೊರೇಟ್ ಕಂಪನಿಗಳ ಕೈ ಸೇರಲಿದೆ ಎಂದರು.
ನಿರಂತರ ನಷ್ಟ, ಬೆಳೆ ವಿಮೆ ಹಗರಣಗಳು ಮತ್ತು ಸಾಲದ ಬಾಧೆಯಿಂದಾಗಿ ಬೇಸತ್ತ ಇಂದಿನ ಯುವ ಪೀಳಿಗೆ ಕೃಷಿಯಿಂದ ದೂರ ಸರಿಯುತ್ತಿದ್ದು, ರೈತರು ಒಗ್ಗೂಡಿ ಕೃಷಿ ನೀತಿಗಳ ಸುಧಾರಣೆಗೆ ಒತ್ತಾಯಿಸದಿದ್ದರೆ, ಭವಿಷ್ಯದಲ್ಲಿ ದೇಶವು ತೀವ್ರ ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ. ವಿದ್ಯುತ್ ಇಲಾಖೆಯನ್ನು ಟಾಟಾ ಪವರ್ ನಂತಹ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸುವ ಪ್ರಕ್ರಿಯೆಗೆ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಖಾಸಗೀಕರಣ ಜಾರಿಯಾಗಿ ಕೃಷಿ ಪಂಪ್ ಸೆಟ್ಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಬಂದರೆ ಬಡ ರೈತರು ಜಮೀನಿಗೆ ನೀರು ಹರಿಸಲಾಗದೆ ಕೃಷಿಯನ್ನೇ ಕೈಬಿಡಬೇಕಾಗುತ್ತದೆ. ಇದು ಗ್ರಾಮೀಣ ಆರ್ಥಿಕತೆಯನ್ನೇ ಧ್ವಂಸ ಮಾಡುತ್ತದೆ.
ಹಾವೇರಿ ಜಿಲ್ಲಾ ರೈತ ಸಂಘವು ಎಂದಿಗೂ ತನ್ನ ಹೋರಾಟವನ್ನು ಹುಡುಗಾಟ ಎಂದು ಪರಿಗಣಿಸಿಲ್ಲ. ದೇಶಕ್ಕೆ ಸೈನಿಕ ಎಷ್ಟು ಮುಖ್ಯವೋ, ಅನ್ನ ನೀಡುವ ರೈತನೂ ಅಷ್ಟೇ ಮುಖ್ಯ. ಜಿಲ್ಲೆಯಲ್ಲಿ ಆಳು ಮಕ್ಕಳ ದರ್ಬಾರನ್ನು ಹತೋಟಿಯಲ್ಲಿಡಲು ರೈತ ಸಂಘದ ಒಗ್ಗಟ್ಟೇ ಇಂದು ಜಿಲ್ಲೆಯ ಅತಿ ದೊಡ್ಡ ಶಕ್ತಿಯಾಗಿದೆ. ಜಿಲ್ಲೆಯಾದ್ಯಂತ ಸಂಘವು ಕೈಗೊಂಡಿರುವ ಕಠಿಣ ನಿಲುವುಗಳಿಂದ ರೈತರಿಗೆ ತಕ್ಕ ಮಟ್ಟಿಗೆ ನ್ಯಾಯ ದೊರಕುತ್ತಿದೆ ಎಂದು ರಾಮಣ್ಣ ಕೆಂಚಳ್ಳೆರ ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ವಿದ್ಯುತ್ ಸರಬರಾಜು ಕಂಪನಿಗಳನ್ನು ಟಾಟಾ ಪವರ್ ಅಥವಾ ಇತರ ಖಾಸಗಿ ಕಂಪನಿಗಳಿಗೆ ಖಾಸಗೀಕರಣ ಮಾಡುತ್ತಿರುವುದು ರೈತರ ಮತ್ತು ಗ್ರಾಮೀಣ ಜನಸಾಮಾನ್ಯರ ಹಿತದೃಷ್ಟಿಯಿಂದ ಶೇಕಡಾ ೧೦೦ ರಷ್ಟು ಸರಿಯಾದ ಕ್ರಮವಲ್ಲ ಇದನ್ನು ಹಾವೇರಿ ಜಿಲ್ಲಾ ರೈತ ಸಂಘ ತೀವ್ರವಾಗಿ ಖಂಡಿಸುತ್ತಿದೆ, ಕರ್ನಾಟಕದಲ್ಲಿ ರೈತರ ಪಂಪ್ಸೆಟ್ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ. ಖಾಸಗೀಕರಣವಾದರೆ ರೈತರು ಬಳಸುವ ಪ್ರತಿ ಯೂನಿಟ್ ವಿದ್ಯುತ್ ಗೂ ಕಟ್ಟುನಿಟ್ಟಾದ ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಬರುತ್ತದೆ. ಖಾಸಗಿ ಕಂಪನಿಗಳು ಲಾಭ ನಷ್ಟದ ಲೆಕ್ಕಾಚಾರ ಮಾಡಲು ಕೃಷಿ ಪಂಪ್ಸೆಟ್ಗಳಿಗೂ ಕಡ್ಡಾಯವಾಗಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗುತ್ತವೆ. ಅಂದರೆ ಮೊಬೈಲ್ ರೀಚಾರ್ಜ್ ಮಾಡಿದಂತೆ ಹಣ ಪಾವತಿಸಿದರೆ ಮಾತ್ರ ಜಮೀನಿಗೆ ನೀರು ಹರಿಸಲು ಸಾಧ್ಯವಾಗುತ್ತದೆ, ಇದು ಬಡ ರೈತರನ್ನು ಸಾಲದ ಸುಳಿಗೆ ತಳ್ಳುತ್ತದೆ ಎಂದರು.
ಹೆಚ್ಚು ಖರ್ಚು ಮತ್ತು ಕಡಿಮೆ ಆದಾಯ ತರುವ ಗ್ರಾಮೀಣ ಭಾಗದ ಕೃಷಿ ಲೈನ್ಗಳು, ಸುಟ್ಟ ಟ್ರಾನ್ಸ್ಫಾರ್ಮರ್ ಬದಲಾವಣೆ ಹಾಗೂ ಹಳೆಯ ಕಂಬಗಳ ದುರಸ್ತಿಗೆ ಸಕಾಲದಲ್ಲಿ ಸ್ಪಂದಿಸುವುದಿಲ್ಲ. ವಿದ್ಯುತ್ ವಿತರಣೆ ಸಂಪೂರ್ಣವಾಗಿ ಖಾಸಗಿ ಕಂಪನಿಗಳ ಕೈ ಸೇರಿದರೆ, ನಿರ್ವಹಣಾ ವೆಚ್ಚದ ನೆಪದಲ್ಲಿ ಅವರು ಪದೇ ಪದೇ ವಿದ್ಯುತ್ ದರವನ್ನು ಹೆಚ್ಚಿಸುತ್ತಾರೆ. ಆಗ ಮಧ್ಯಮ ವರ್ಗದ ಗ್ರಾಹಕರು ಮತ್ತು ರೈತರು ಇಸ್ಕಾಮ್ಗಳ ದಬ್ಬಾಳಿಕೆಗೆ ಬಲಿಯಾಗಬೇಕಾಗುತ್ತದೆ. ವಿದ್ಯುತ್ ಎನ್ನುವುದು ಕೇವಲ ವ್ಯಾಪಾರದ ವಸ್ತುವಲ್ಲ, ಅದು ಕೃಷಿ ಮತ್ತು ದೇಶದ ಭದ್ರತೆಯ ಮೂಲ ಆಧಾರ. ಸರ್ಕಾರವು ಇಸ್ಕಾಮ್ಗಳಲ್ಲಿರುವ ಆಡಳಿತಾತ್ಮಕ ಭ್ರಷ್ಟಾಚಾರ ಮತ್ತು ಸೋರಿಕೆಯನ್ನು ತಡೆದು ಅವುಗಳನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕೇ ಹೊರತು ಖಾಸಗಿಯವರಿಗೆ ಧಾರೆ ಎರೆಯಬಾರದು ಎಂದು ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದರು.
ರೈತರ ವಿವಿಧ ಬೇಡಿಕೆಗ//ಲನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಾಹಾಂತೇಶ ಅವರ ಮೂಲಕ ಸರ್ಕಾರಕ್ಕೆ ಮನಚಿ ಸಲ್ಲಿಸಲಾಯಿತು. ರೈತ ಮುಖಂಡರಾದ ಮಾಲತೇಶ ಪೂಜಾರ, ಹೆಚ್. ಹೆಚ್. ಮುಲ್ಲಾ, ಶಿವಯೋಗಿ ಹೊಸಗೌಡ್ರ, ಶಿವಬಸಪ್ಪ ಗೋವಿ, ಪ್ರಭಾಕರ ಪ್ಯಾಟಿ, ರುದ್ರಗೌಡ ಕಾಡನಗೌಡ್ರ, ಶಂಕ್ರಣ್ಣ ಶಿರಗಂಬಿ, ಮರಿಗೌಡ ಪಾಟೀಲ, ಗಂಗಾದರ ಎಲಿ, ಬಸನಗೌಡ ಗಂಗಪ್ಪನವರ, ಚನ್ನಪ್ಪ ಮರಡೂರ, ದಿಳ್ಳೇಪ್ಪ ಮಣ್ಣೂರ ಮಾತನಾಡಿ ೨೦೦೮ ರಲ್ಲಿ ದೇಶದಲ್ಲಿ ರಸಗೊಬ್ಬರ ಕೊರತೆಯಾದಾಗ ಮೊದಲು ಧ್ವನಿ ಎತ್ತಿದ್ದೇ ಹಾವೇರಿ ಜಿಲ್ಲೆಯ ರೈತರು. ಇಲ್ಲಿ ನಡೆದ ಗೊಬ್ಬರ ಚಳವಳಿ ಮತ್ತು ರೈತರ ಬಲಿದಾನವು ಇಡೀ ದೇಶದ ಗಮನ ಸೆಳೆದಿತ್ತು. ಅಂದಿನಿಂದ ಇಂದಿನವರೆಗೆ ರಸಗೊಬ್ಬರ ಕಪ್ಪು ಮಾರುಕಟ್ಟೆ ವಿರುದ್ಧ ಹಾವೇರಿ ಜಿಲ್ಲೆ ಸದಾ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ಜೂನ್ ೧೦ ನೇ ತಾರೀಖಿನಂದು ರೈತ ಹುತಾತ್ಮ ದಿನವನ್ನು ಆಚರಿಸಿ, ಹಳೆಯ ಹೋರಾಟದ ಕಿಚ್ಚನ್ನು ಮುಂದಿನ ಪೀಳಿಗೆಯ ಯುವ ರೈತರಿಗೆ ದಾಟಿಸುವ ವ್ಯವಸ್ಥಿತ ಸಂಘಟನೆ ಹಾವೇರಿ ಜಿಲ್ಲೆಯಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ಹಿತಾಸಕ್ತಿ ಬದಿಗಿಟ್ಟು ರೈತರ ಹಿತಕ್ಕಾಗಿ ಜ್ಯಾತ್ಯಾತೀತವಾಗಿ ಪಕ್ಷಾತೀತವಾಗಿ ಹಾವೇರಿ ಜಿಲ್ಲಾ ರೈತ ಸಂಘ ಹೋರಾಟ ಮಾಡುತ್ತಾ ಬಂದಿದ್ದು, ಯಜಮಾನ ಇಲ್ಲದ ಮನೆಯಲ್ಲಿ ಆಳು ಮಕ್ಕಳ ದರ್ಬಾರ್ ಇದ್ದಂತೆ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಸಚಿವ ಸ್ಥಾನ ಇಲ್ಲದಿದ್ದರೂ, ಅಧಿಕಾರಿಗಳು ಮತ್ತು ಖಾಸಗಿ ಕಂಪನಿಗಳ ದಬ್ಬಾಳಿಕೆಯನ್ನು ಹತೋಟಿಯಲ್ಲಿಡಲು ಹಾವೇರಿ ಜಿಲ್ಲಾ ರೈತ ಸಂಘವೇ ಜಿಲ್ಲೆಯ ನಿಜವಾದ ಕಾವಲುಗಾರನಾಗಿ ಕೆಲಸ ಮಾಡುತ್ತಿದೆ. ಹಾವೇರಿ ಜಿಲ್ಲಾ ರೈತ ಸಂಘ ರಾಜ್ಯದ ಇತರೆ ಜಿಲ್ಲೆಗಳ ರೈತರಿಗೂ ದೊಡ್ಡ ಪ್ರೇರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಜಾನ್ ಪುನಿತ್, ಸುಭಾಸ ಬನ್ನಿಹಟ್ಟಿ, ರುದ್ರಪ್ಪ ಅಣ್ಣಿ, ಮಾಲತೇಶ ಪರಪ್ಪನವರ, ಷಣ್ಮುಖಪ್ಪ ಅಂದಲಗಿ, ಅಬ್ದುಲ್ ಖಾದರ್ ಬುಡಂದಿ ಸೇರಿದಂತೆ ನೂರರು ರೈತರು ಭಾಗವಹಿಸಿದ್ದರು.
sub-editor
kourava daily,
haveri

