
ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಡಿಸಿಸಿ ಬ್ಯಾಂಕ್: ಬಹುದಿನಗಳ ಕನಸು ನನಸು: ಸಂಸದ ಬೊಮ್ಮಾಯಿ
ಹಾವೇರಿ: ಕಳೆದ ಒಂದು ದಶಕದ ನಮ್ಮ ಹೋರಾಟ ನಮ್ಮ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮತ್ತು ಪ್ರತ್ಯೇಕ ಹಾಲು ಒಕ್ಕೂಟ ಎರಡೂ ಕನಸು ನನಸಾಗಲಿದೆ. ನಾನು ಸಿಎಂ ಆಗಿದ್ದಾಗ ಹಾವೇರಿಗೆ ಹಾಲು ಒಕ್ಕೂಟವಾಗಿ ಮೆಗಾ ಡೈರಿ ಶೀಘ್ರ ಆರಂಭವಾಗಲಿದೆ. ಅದೇ ರೀತಿ ಈಗ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವ ಎಲ್ಲ ಸಾಧ್ಯತೆಗಳು ಭಾರತ ಸರಕಾರದ ಸಹಕಾರ ಇಲಾಖೆಯ ಸಚಿವರು ಆಗಿರುವ ಗೃಹ ಸಚಿವ ಅಮಿತ್ ಶಾ ಅವರ ದೂರದೃಷ್ಠಿಯಿಂದ ಸಾಕಾರಗೊಳ್ಳಲಿದೆ. ನಾನು ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಹಾವೇರಿ, ಗದಗ ಜಿಲ್ಲೆಯ ರೈತರ ಬಹಳ ದಿನದ ಕನಸು ಬೇಡಿಕೆ ಈಡೇರುವ ಕಾಲ ಬಂದಿದೆ. ಅದೇನೆಂದರೆ, ಭಾರತ ಸರ್ಕಾರದ ಸಹಕಾರ ಇಲಾಖೆ ಒಂದು ಜಿಲ್ಲೆ ಒಂದು ಡಿಸಿಸಿ ಬ್ಯಾಂಕ್ ಎಂಬ ನೀತಿ ಅಡಿಯಲ್ಲಿ ಈಗಾಗಲೇ ನಬಾರ್ಡ್ ಗೆ ಸೂಚನೆ ಕೊಟ್ಟಿದ್ದು, ನಮ್ಮ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವ ಕನಸು ನನಸಾಗಲಿದೆ.
ಈ ಬಗ್ಗೆ ೩೦-೧೦-೨೦೨೫ ಕ್ಕೆ ನಬಾರ್ಡ್ ನ ಜನರಲ್ ಮ್ಯಾನೇಜರ್ ರೆಜಿಸ್ಟ್ರಾರ್ ಕೋ ಆಪರೇಟಿವ್ ಸೊಸೈಟಿ ಗೆ ಪತ್ರ ಬರೆದಿದ್ದು, ಪತ್ರದಲ್ಲಿ ಧಾರವಾಡ, ಹಾವೇರಿ, ಗದಗ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡುವ ಬಗ್ಗೆ ಡಿಸಿಸಿ ಬ್ಯಾಂಕ್ ಧಾರವಾಡ ಕೂಡಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಗೆ ಬೇಕಾದ ಆರ್ಥಿಕ, ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಂ (ಎನ್ ಬಿ ಕೆಎ) (ಐಡಿಡಿ) ೧೦೯೩೧೧ ಎಸ್ ಟಿ ೫೬-೨೦೨೫-೨೬, ೩೦-೧೦-೨೦೨೫ ಈ ಪತ್ರದ ಮುಖಾಂತರ ತಿಳಿಸಿರುತ್ತಾರೆ. ರೆಜಿಸ್ಟ್ರಾರ್ ಕೋ ಆಪರೇಟಿವ್ ಸೊಸೈಟಿಯವರು ದಿನಾಂಕ ೩೧-೧-೨೦೨೬ ಕ್ಕೆ ಪತ್ರ ಬರೆದು ಸೂಚಿಸಿರುತ್ತಾರೆ.
೩೦-೧೦-೨೦೨೬ ರಲ್ಲಿ ಭಾರತ ಸರ್ಕಾರ ಒಂದು ಜಿಲ್ಲೆಗೆ ಒಂದು ಬ್ಯಾಂಕ್ ತೀರ್ಮಾನ ಕೈಗೊಂಡರೂ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳದಿರುವುದು ಅತ್ಯಂತ ದುರದೃಷ್ಟಕರ. ನಾನು ಸಹಕಾರ ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸ ಜಿಲ್ಲೆಗೆ ಹೊಸ ಡಿಸಿಸಿ ಬ್ಯಾಂಕ್ ಮಾಡುವ ಎಲ್ಲ ಜಿಲ್ಲೆಗಳ ಬೇಡಿಕೆ ಈಡೇರಿಸಲು ಎಲ್ಲ ಕ್ರಮ ಕೈಗೊಂಡು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಲು ಆಗ್ರಹಿಸುತ್ತೇನೆ.
ನಾನು ಡಿಸಿಸಿ ಬ್ಯಾಂಕ್ ಎಂಡಿ ಮತ್ರು ಜಿಎಂ ಜೊತೆಗೆ ಮಾತನಾಡಿದ್ದೇನೆ. ಬರುವ ತಿಂಗಳು ಡಿಸಿಸಿ ಬ್ಯಾಂಕ್ ಬೋರ್ಡ್ ಮೀಟಿಂಗ್ ನಲ್ಲಿ ಎಲ್ಲ ಶಿಪಾರಸ್ಸುಗಳಿಗೆ ಒಪ್ಪಿಗೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಲು ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಗೆ ಕೇಳಿಕೊಳ್ಳುತ್ತೇನೆ. ಕೂಡಲೆ ಈ ಬಗ್ಗೆ ಕ್ರಮ ತೆಗೆದುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ರಾಜ್ಯ ಸರ್ಕಾರ ಕಳಿಸಿದ್ದಾದರೆ ಬರುವ ಆರ್ಥಿಕ ವರ್ಷದಲ್ಲಿಯೇ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವುದು ನಿಶ್ಚಿತ ಇದಕ್ಕೆ ಎಲ್ಲರ ಸಹಕಾರವನ್ನು ಕೋರುತ್ತೇನೆ. ಮತ್ತೊಮ್ಮೆ ನಾನು ವಯಕ್ತಿಕವಾಗಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರು, ನಮ್ಮ ನಾಯಕರಾದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

