ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಂಜುನಾಥ ಮಡಿವಾಳರ ಬಿಜೆಪಿ ಅಭ್ಯರ್ಥಿಯಾಗಲಿ: ಮಾಳಗಿ
ಹಾವೇರಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ಮಾಡುವಾಗಲೂ ಸಾಮಾಜಿಕ ನ್ಯಾಯ ಅನುಸರಿಸಲಿಲ್ಲ, ಅವಿಭಾಜ್ಯ ಧಾರವಾಡ ಜಿಲ್ಲೆಯಲ್ಲಿ ೧೭ ವಿಧಾನಸಭಾ ಕ್ಷೇತ್ರಗಳ ಪೈಕಿ ೩ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ೧೪ ಕ್ಷೇತ್ರಕ್ಕೆ ಕೇವಲ ಲಿಂಗಾಯತ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಯಿತು. ಇದರಿಂದ ಹಿಂದುಳಿದ ವರ್ಗಗಳು, ಸಣ್ಣ-ಸಣ್ಣ ಜಾತಿಯವರು ಬಿಜೆಪಿಯಲ್ಲಿ ನಮಗೆ ಬೆಲೆ ಇಲ್ಲ ಎಂದು ಭಾವಿಸಿ ಬಿಜೆಪಿಯಿಂದ ದೂರ ಉಳಿದು ಕಾಂಗ್ರೆಸ್ ಬೆಂಬಲಿಸಿದರು. ಹೀಗಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಹಿಂದುಳಿದ ವರ್ಗದಕ್ಕೆ ಆದ್ಯತೆ ನೀಡಿ ಬಿಜೆಪಿಯ ಯುವಮುಖಂಡ ಹಿಂದುಳಿದ ವರ್ಗದ ಮಂಜುನಾಥ ಮಡಿವಾಳರಿಗೆ ಹಾವೇರಿಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಡಿ.ಎಸ್.ಎಸ್ ಮುಖಂಡ, ಲಿಡ್ಕರ್ ಸಂಸ್ಥೆಯಮಾಜಿ ಉಪಾಧ್ಯಕ್ಷ ಡಿ.ಎಸ್.
ಮಾಳಗಿ ಆಗ್ರಹಿಸಿದರು.
ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಲೆಕ್ಕಾಚಾರ ಹಾಕಿ ದಲಿತ ಸಮಾಜಕ್ಕೆ ಒಳ ಮೀಸಲಾತಿ ಕಲ್ಪಿಸಿದರು. ಆದರೆ, ಪಕ್ಷದ ಮುಖಂಡರು, ಶಾಸಕರು, ಸಚಿವರು ಮೀಸಲಾತಿಯನ್ನು ಜನರಿಗೆ ಸರಿಯಾಗಿ ಅರ್ಥೈಸುವಲ್ಲಿ ವಿಫಲರಾದ ಪರಿಣಾಮ ಬಿಜೆಪಿಗೆ ಸೋಲಾಗಿದೆ. ಚುನಾವಣೆ ಸಮಯದಲ್ಲಿ ಬಿಜೆಪಿ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಇದನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾದರು ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ಅಭ್ಯರ್ಥಿಗೆ ಟಿಕೆಟ್ ನೀಡಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಶಿವಕುಮಾರ ಉದಾಸಿ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಒಂದು ವೇಳೆ ಅವರಿಗೇ ಟಿಕೆಟ್ ನೀಡುವುದಾದರೆ ನಮ್ಮ ಅಭ್ಯಂತರ ಇಲ್ಲ. ಆದರೆ, ಟಿಕೆಟ್ ಬದಲಾವಣೆ ಮಾಡುವುದಾದರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ಪಕ್ಷದ ಯುವ ಮುಖಂಡ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಡಿವಾಳರ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ ಅವರು, ಮಂಜುನಾಥ ಮಡಿವಾಳರ ಅವರಿಗೆ ಟಿಕೆಟ್ ನೀಡಿದರೆ ದಲಿತರು, ಹಿಂದುಳಿದ ವರ್ಗದವರೆಲ್ಲಾ ಅವರ ಬೆಂಬಲಕ್ಕೆ ನಿಂತು ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಮುಖಂಡ, ಎಂ.ಪಿ ಟಿಕೆಟ್ ಆಕಾಂಕ್ಷಿ ಮಂಜುನಾಥ ಮಡಿವಾಳ ಮಾತನಾಡಿ, ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಹೊಸಬರಿಗೆ ಟಿಕೆಟ್ ನೀಡುವುದಾದರೆ ನನಗೇ ಟಿಕೆಟ್ ನೀಡುವಂತೆ ಕೇಳುತ್ತಿದ್ದೇನೆ.
ಕಳೆದ ಒಂದು ದಶಕದಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ನೀಡಿದ್ದ ವಿವಿಧ ಪದಾಧಿಕಾರಿ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇನೆ ಎಂದರು.
ಬಿಜೆಪಿ ಮುಖಂಡರಾದ ಮಂಜುನಾಥ ತಾಂಡೂರ, ಜಗದೀಶ ಕನವಳ್ಳಿ, ಶಿವಬಸಪ್ಪ ಚೌಶಟ್ಟಿ, ಉದಯಕುಮಾರ ಶೆಟ್ಟಿ ಇದ್ದರು.
ಕಲಕೋಟಿ ರಾಜೀನಾಮೆ ನೀಡಲಿ
ಜಿಲ್ಲೆಯಲ್ಲಿ ಬಿಜೆಪಿ ಹಿನಾಯ ಸೋಲಿಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೇ ಹೊಣೆ. ಹೀಗಾಗಿ ಕೂಡಲೇ ಸಿದ್ದರಾಜ ಕಲಕೋಟಿ ಅವರು ನೈತಿಕ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಕಲ್ಪಿಸಬೇಕು ಎಂದುಡಿ.ಎಸ್.ಎಸ್ ಮುಖಂಡ, ಲಿಡ್ಕರ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಆಗ್ರಹಿಸಿದರು.