ಹೆಚ್ಚುತ್ತಲೇ ಇದೆ ಬಿಸಿಲಿನ ಕಾವು, ಏರುತ್ತಿದೆ ಕಪಪ ಕ್ಷೇತ್ರದ ಚುನಾವಣಾ ಕಾವು
ಪದವೀಧರ ಮತದಾರರಿಗೂ ತೊಡಿಸಲಾಗುತ್ತಿದೆ ಜಾತಿಯ ಮೂಗು ದಾರ!
ಮಾಲತೇಶ ಅಂಗೂರ
ಹಾವೇರಿ: ಒಂದು ಕಡೆಗೆ ಹಾವೇರಿ ಜಿಲ್ಲೆಯಾದ್ಯಂತ ಬಿಸಿಲಿನ ಕಾವು ಹೆಚ್ಚುತ್ತಿದೆ, ಇನ್ನೊಂದು ಕಡೆಗೆ
ಪಶ್ಚಿಮ ಪದವೀಧರ ಕ್ಷೇತ್ರದಿಂದ ಅ.24ಕ್ಕೆ ನಡೆಯುವ ವಿಧಾನಪರಿಷತ್ ಚುನಾವಣೆ ಕಾವು ಸಹ ಸುಡು ಬಿಸಿಲಿನ ಹಾಗೆ ಎರಿದೆ.
ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿಯ ಕಾಳಗ ನಡೆಯುತ್ತಿದೆ.
ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಗೆ ಬರುವ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಮೋಹನ ಲಿಂಬಿಕಾಯಿ ಹಾಗೂ ಬಿಜೆಪಿಯಿಂದ ಎಸ್. ವಿ. ಸಂಕನೂರ ಅಖಾಡದಲ್ಲಿ ಪರಸ್ಪರ ತೊಡೆತಟ್ಟಿದ್ದಾರೆ.
2008ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಕಾಂಗ್ರೆಸ್ನ ಪ್ರಭಾವಿ ನಾಯಕ ಹೆಚ್.ಕೆ. ಪಾಟೀಲ್ ಅವರನ್ನು ಸೋಲಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಇದೀಗ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಕ್ಷೇತ್ರವನ್ನು ಕಾಂಗ್ರೆಸ್ಗೆ ಮರಳಿ ತರುತ್ತೇನೆ ಎಂಬ ವಿಶ್ವಾಸ ಅವರದ್ದಾಗಿದೆ.
ಲಿಂಬಿಕಾಯಿ ಅವರು ಮೊದಲಿಗೆ ವಿಧಾನಸಭಾ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದೀಗ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಿಂಬಿಕಾಯಿ ಅವರನ್ನೇ ಕಣಕ್ಕಿಳಿಸಿದೆ.
ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ ಕ್ಷೇತ್ರದ ವ್ಯಾಪ್ತಿಯಲ್ಲಿ 24 ವಿಧಾನಸಭಾ ಕ್ಷೇತ್ರಗಳ ಪೈಕಿ 17+1 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. 6 ಜನ ಶಾಸಕರಷ್ಟೇ ಬಿಜೆಪಿಗರು ಇದ್ದಾರೆ. ಹೀಗಾಗಿ ಕಾಂಗ್ರೆಸ್ ಗೆಲುವಿಗೆ
ಅನುಕೂಲಕರ ವಾತಾವರಣವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಲಿಂಬಿಕಾಯಿ ಅವರು .
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಕಾನೂನು ಸಲಹೆಗಾರರಾಗಿದ್ದರು ಲಿಂಬಿಕಾಯಿ.
ಕಾಂಗ್ರೆಸ್ ಸರ್ಕಾರ 70 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಮಾಡುತ್ತಿರುವುದನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ.
ಬಿಜೆಪಿಯಿಂದ ಸಂಕನೂರ: ಇನ್ನು ಎರಡು ಬಾರಿ ಕ್ಷೇತ್ರದಿಂದ ಗೆದ್ದು
ಎಂಎಲ್ಸಿ ಆಗಿರುವ ಪ್ರೊ, ಎಸ್.ವಿ. ಸಂಕನೂರ ಅವರನ್ನೇ ಬಿಜೆಪಿ
3ನೇ ಬಾರಿಯೂ ಕಣಕ್ಕಿಳಿಸಿದೆ. ಈ ಸಲವೂ ಗೆಲುವು ತಮ್ಮದೇ ಎನ್ನುತ್ತಾರೆ.
ಕಳೆದ ಎರಡು ಅವಧಿಯಲ್ಲಿ ಪರಿಷತ್ ಸದಸ್ಯರಾಗಿದ್ದು, ಶಿಕ್ಷಕರು ಹಾಗೂ ಪದವೀಧರ ಸದಸ್ಯರ ಸಂಪರ್ಕ ಹೊಂದಿದ್ದು ಗೆಲುವ ವಿಶ್ವಾಸದಲ್ಲಿ ಬಿಜೆಪಿ ಅಭ್ಯರ್ಥಿ ಸಂಕನೂರು ಇದ್ದಾರೆ.
ಈ ಮಧ್ಯೆ ಪದವೀಧರರ ಮತದಾರರಿಗೂ ಸಹ ನಾನಾ ಆಮಿಷ ಗಳನ್ನು ಒಡ್ಡಲಾಗುತ್ತಿದೆ.ಮತದಾರರಿಗೆ ಅಭ್ಯರ್ಥಿಗಳ ಜಾತಿ ವಿವರಿಸಿ, ಮತದಾರರನ್ನು ಜಾತಿಯ ಮೂಗುದಾರ ತೊಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ, ಅಕ್ಟೋಬರ್ 23 ರಂದು ಮತದಾನ ನಡೆಯಲಿದ್ದು, ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 97,398 ಮತದಾರರಿದ್ದಾರೆ.14 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆಯಲ್ಲಿದ್ದಾರೆ.
ಜಿಲ್ಲಾವಾರು ಮತದಾರರ ವಿವರ: ಧಾರವಾಡ ಜಿಲ್ಲೆಯಲ್ಲಿ 35,117 ಮತದಾರರಲ್ಲಿ 20013 ಪುರುಷರು ಹಾಗೂ 15,104 ಮಹಿಳೆಯರು. ಗದಗ ಜಿಲ್ಲೆಯಲ್ಲಿ 21,594 ಮತದಾರರಲ್ಲಿ 13,757 ಪುರುಷರು ಹಾಗೂ 7837 ಮಹಿಳೆಯರು. ಹಾವೇರಿ ಜಿಲ್ಲೆಯಲ್ಲಿ 24648 ಮತದಾರರಲ್ಲಿ 15547 ಪುರುಷರು ಹಾಗೂ 9101 ಮಹಿಳೆಯರು. ಉತ್ತರ ಕನ್ನಡ ಜಿಲ್ಲೆಯಲ್ಲಿ 16039 ಮತದಾರರಲ್ಲಿ 8028 ಪುರುಷರು ಹಾಗೂ 8011 ಮಹಿಳೆಯರು. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 97398 ಪದವಿ ಮತದಾರರು ಇರುತ್ತಾರೆ.
137 ಮತಗಟ್ಟೆಗಳನ್ನು
ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 137 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 128 ಮುಖ್ಯ ಮತಗಟ್ಟೆಗಳು ಹಾಗೂ 9 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಪತ್ರಗಳ ಮೂಲಕ ಚುನಾವಣೆ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮತಪತ್ರಗಳ ಮೂಲಕ ನಡೆಯಲಿದೆ. ಈ ಚುನಾವಣೆಯಲ್ಲಿ ಮೇಲಿನ ಯಾರೂ ಅಲ್ಲ (NOTA) ಆಯ್ಕೆಗೆ ಅವಕಾಶ ಇರುವುದಿಲ್ಲ. ಮತ ಎಣಿಕೆ ಕೇಂದ್ರ ಹಾಗೂ ಭದ್ರತಾ ಕೊಠಡಿಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ.
ಅಭ್ಯರ್ಥಿಗಳ ವಿವರ:
“ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೋಹನ ಲಿಂಬಿಕಾಯಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಕನೂರ ಎಸ್.ವಿ. ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳಾದ ನಿಶಾಂತ ಬಂಕಾಪೂರ, ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ತಳವಾರ ಶಿವಕುಮಾರ, ಕಾಂತಕುಮಾರ್, ಬಸವರಾಜ ಕೊಟಗಿ, ಜೀಶಾನ ಅಹ್ಮದಖಾನ ಪಠಾಣ, ಸಂತೋಷ ವೆರ್ಣೇಕರ, ಉಮೇಶ ದೈವಜ್ಞ, ಕೃಷ್ಣ, ಜಿಶಾನ ಸಿರಸಂಗಿ, ಅಬ್ದುಲ ಮುನ್ನನ ಅವರು ಅಂತಿಮ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ”