
ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ವಯ ಸ್ಥಳೀಯ ಚುನಾವಣೆಗಳನ್ನು ನಡೆಸಲು ಆಗ್ರಹ
ಹಾವೇರಿ: ಪ್ರಸಕ್ತ ಎಸ್‌ಐಆರ್ ಪಟ್ಟಿ ತಿರಸ್ಕರಿಸಿ, ೨೦೨೫ರ ಮತಪಟ್ಟಿಯನ್ನು ಪರಿಷ್ಕರಿಸಿ ಸ್ಥಳೀಯ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿಸಬೇಕು ಎಂದು ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ರವರಿಗೆ ಹಾವೇರಿಯ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಮನವಿ ಮಾಡಿದೆ.
ನಗರದ ತಹಶೀಲ್ದಾರ್ ಕಛೇರಿಯಲ್ಲಿ ಗುರುವಾರ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಉಪತಹಶೀಲ್ದಾರರಾದ ಎಸ್.ಎಚ್ ಏರಿಮನಿ ಅವರ ಮೂಲಕ ಮಾನ್ಯ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದರು.
ಚುನಾವಣಾ ಆಯೋಗವು ತನ್ನ ಹದ್ದುಮೀರಿ ನಡೆದುಕೊಂಡು ಸರ್ವೋಚ್ಚ ನ್ಯಾಯಲದ ಕಟಕಟೆಯಲ್ಲಿ ಬಹಳ ಕೆಟ್ಟದಾಗಿ ಸಿಕ್ಕಿಹಾಕಿಕೊಂಡಿರುವುದು ಮಾತ್ರವಲ್ಲದೆ, ಪರೋಕ್ಷ ರೀತಿಯಲ್ಲಿ ತನ್ನ ಪ್ರಕ್ರಿಯೆ ದೋಷಪೂರಿತವಾದುದು ಎಂದು ಒಪ್ಪಿಕೊಂಡಿದೆ. ನವೆಂಬರ್ ೬ ರಂದು ಇನ್ನೂ ಎಸ್‌ಐಆರ್ ಮುಂದುವರಿಯುತ್ತಿರುವ ೭ ಹೊಸ ಕಾರ್ಯಸೂಚಿಯನ್ನು ಕಳಿಸಿ ಡಿಲೀಟ್ ಆದವರ ಪಟ್ಟಿಯನ್ನು ಪ್ರತಿ ಬೂತಿನಲ್ಲಿ ಪ್ರಕಟಿಸಿ, ಪ್ರತಿ ಮನೆಗೆ ಮಾಹಿತಿ ನೀಡಿ, ತಪ್ಪಾಗಿ ಡಿಲೀಟ್ ಮಾಡಲ್ಪಟ್ಟವರಿಂದ ಫಾರಂ ೬ಅನ್ನು ತುಂಬಿಸಿಕೊಳ್ಳದೆ ಮತ್ತೊಮ್ಮೆ ಎನ್ಯುಮುರೇಷನ್ ಫಾರಂ ಅನ್ನೇ ಕೊಟ್ಟು ಹಳೆ ಎಪಿಕ್ ಐಡಿಯಲ್ಲೇ ತೆಗೆದುಕೊಳ್ಳಿ, ಒಂದು ವೇಳೆ ಅವರು ಬೇರೆ ಕಡೆಗೆ ಶಿಫ್ಟ್ ಆಗಿದ್ದರೆ ಅವರಿಂದಲೂ ಎನ್ಯುಮುರೇಷನ್ ಫಾರಂ ಮತ್ತು ಹೊಸ ವಿಳಾಸದ ವಿವರ ಪಡೆದು ಅವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಿ ಎಂದು ಹೇಳಿದೆ.
ಎಸ್‌ಐಆರ್ ಮುಗಿದಿರುವ ರಾಜ್ಯಗಳಲ್ಲಿ ಎಸ್‌ಎಸ್‌ಆರ್ ನಡೆಸಲು ಆದೇಶಿಸಿದೆ. ಇದರ ಎಸ್‌ಐಆರ್ ಪ್ರಕ್ರಿಯೆಯಿಂದ ತಪ್ಪಾಗಿ ಡಿಲೀಟ್ ಆಗಿದ್ದಾರೆ, “ಈಗಾಗಲೇ ನೊಂದಾಯಿತರಾಗಿದ್ದ ಮತದಾರರಿಂದ ಮತ್ತೆ ಫಾರಂ ೬ ಅನ್ನು ತುಂಬಿಸಿಕೊಂಡಿದ್ದು ತಪ್ಪು: “ಮನೆ ಶಿಫ್ಟ್ ಮಾಡಿಕೊಂಡವರನ್ನು ಡಿಲೀಟ್ ಮಾಡಿದ್ದು ತಪ್ಪು” ಎಂದು ಚುನಾವಣಾ ಆಯೋಗ ತಪ್ಪೋಪ್ಪಿಗೆ ಮಾಡಿಕೊಂಡಿದೆ. ಕೋರ್ಟಿನಲ್ಲಿ ಅನೇಕ ವಿಚಾರಗಳ ಕುರಿತು ವಿಚಾರಣೆ ನಡೆಯುತ್ತಿದೆ. ಇನ್ನೂ ಹೆಚ್ಚೆಚ್ಚು ಅಕ್ರಮಗಳನ್ನು ಅದು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಕರ್ನಾಟಕದಲ್ಲಿ ಅಂತಿಮ ಎಂದು ಪ್ರಕಟಗೊಂಡಿರುವ ಎಸ್‌ಐಆರ್ ಪಟ್ಟಿ ತರ್ಕಹೀನವಾಗಿದೆ ಮತ್ತು ಅನೇಕ ದೋಷಗಳಿಂದ ಕೂಡಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ ೧೮ ವರ್ಷ ದಾಟಿರುವ ವಯಸ್ಕರ ಜನಸಂಖ್ಯೆ ೫.೨ ಕೋಟಿ. ಹೀಗಿರುವಾಗ ಮತದಾರರ ಪಟ್ಟಿಯಲ್ಲಿ ೪.೫ ಕೋಟಿ ಜನರು ಮಾತ್ರ ಉಳಿಯಲು ಹೇಗೆ ಸಾಧ್ಯ? ಉಳಿದ ೭೦ ಲಕ್ಷ ಜನರು ಏಕೆ ಮತದಾರರ ಪಟ್ಟಿಯಲ್ಲಿ ಇಲ್ಲ? ಬೆಂಗಳೂರು ವೇಗಗತಿಯಲ್ಲಿ ಬೆಳೆಯುತ್ತಿರುವಾಗ ಮತದಾರರ ಪಟ್ಟಿಯಲ್ಲಿ ಅರ್ಧಕ್ಕರ್ಧ ಜನರು ಕಣ್ಮರೆಯಾಗಲು ಹೇಗಾದರೂ ಸಾಧ್ಯ? ಮತ ಕಾವಲು ಸಮಿತಿ” ಪರಿಶೋಧನೆ ನಡೆಸಿದ ಎಲ್ಲಾ ೭೩ ಬೂತ್ ಗಳಲ್ಲೂ ತಪ್ಪಾಗಿ ಡಿಲೀಟ್ ಆದ ನೂರಾರು ಉದಾಹರಣೆಗಳು ಸಿಕ್ಕಿರುವಾಗ ಇಡೀ ರಾಜ್ಯದ ೫೪ ಸಾವಿರ ಬೂತುಗಳಲ್ಲಿ ಡಿಲೀಟ್ ಆದ ಎಷ್ಟು ಜನ ಇರಬಹುದು? ಉದಾಹರಣೆಗೆ ಬಹುಭಾಷಾ ನಟರಾದ ಪ್ರಕಾಶ್ ರಾಜ್ ರೀತಿ ತಪ್ಪಾದ ಕಾರಣಕ್ಕೆ ಡಿಲೀಟ್ ಮಾಡಲ್ಪಟ್ಟ ಜೀವಂತ ಉದಾಹರಣೆ ಕಣ್ಣ ಮುಂದೆಯೇ ಇದ್ದರೂ ಅವರನ್ನು ಸಕ್ರಮ ರೀತಿಯಲ್ಲಿ ನೊಂದಾಯಿಸಿಕೊಳ್ಳದೆ, ಇಂತಹವರನ್ನು ಆಯೋಗವು ಹೊರಗಿಟ್ಟು ಏತಕ್ಕೆ ಹಟ ಸಾಧಿಸುತ್ತಿದೆ? ಈ ಯಾವ ಪ್ರಶ್ನೆಗಳಿಗೂ ಚುನಾವಣಾ ಆಯೋಗದ ಬಳಿ ಉತ್ತರವಿಲ್ಲ.
ಎಸ್‌ಐಆರ್ ಅನ್ನು ದೇಶದ ಎಲ್ಲಾ ನಾಗರೀಕ ಸಂಘಟನೆಗಳು ಸಾರಾಸಗಟು ತಿರಸ್ಕರಿಸಿವೆ. ಈಗ “ಎಸ್‌ಐಆರ್ ವಿರುದ್ಧ ಜನತೆ” ಎಂಬ ಅಖಿಲ ಭಾರತ ಮಟ್ಟದ ವೇದಿಕೆ ರೂಪಿಸಿಕೊಂಡು ’ಗ್ಯಾನೇಶ್ ಕುಮಾರ್ ರಾಜಿನಾಮೆಗಾಗಿ ಮತ್ತು ಎಸ್‌ಐಆರ್ ರದ್ದತಿಗಾಗಿ ನಿರಂತರ ಆಂದೋಲನಕ್ಕೆ ಇಳಿದಿವೆ. ಬಿಜೆಪಿ ಹೊರತುಪಡಿಸಿದಂತೆ ಮಿಕ್ಕೆಲ್ಲಾ ಪಕ್ಷಗಳು ಎಸ್‌ಐಆರ್ ಅನ್ನು ತಿರಸ್ಕರಿಸಿವೆ. ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಹೊರಗೂ ಮತ್ತು ಓಳಗೂ ಈ ಹೋರಾಟ ಮತ್ತಷ್ಟು ಬಿಸಿ ಏರಲಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ೨೦೨೫ರ ಮತಪಟ್ಟಿಯನ್ನು ಸಾರ್ವಜನಿಕ ಪರಿಶೀಲನೆಯ ಮೂಲಕ ಪರಿಷ್ಕರಿಸಿ ಸ್ಥಳೀಯ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಹಾಗೂ ಎಸ್‌ಐಆರ್ ರದ್ದುಪಡಿಸಲು ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಫ್‌ಐ ಅಖಿಲ ಭಾರತ ಕೆಂದ್ರ ಸಮಿತಿ ಸದಸ್ಯ ಬಸವರಾಜ ಪೂಜಾರ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಅರುಣ ನಗವತ, ರೈತ ಸಂಘದ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ, ಅಲೆಮಾರಿ ಸಂಘಟನೆ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ, ಬಹುಜನ ಸಮಾಜವಾದಿ ಪಕ್ಷದ ಮುಖಂಡ ಎಂ.ಕೆ ಮಕಬುಲ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ, ಯುವಜನ ಮುಖಂಡ ಶರಣಪ್ಪ ಸಂಗನಾಳ ಸೇರಿದಂತೆ ಇತರರು ಇದ್ದರು.

