
ಅನಾರೋಗ್ಯಕ್ಕೆ ಒಳಗಾಗಿ ಕಳೆದ ಆರು ತಿಂಗಳಿಂದ ಚಿಕಿತ್ಸೆ ಪಡೆಯತ್ತಿರುವ ನಾನು(ಈ ಬಗ್ಗೆ ಎರಡುಬಾರಿ ಬರೆದಿರುವೆ) ತಿಂಗಳಿಗೊಮ್ಮೆ ಹುಬ್ಬಳ್ಳಿಗೆ ವೈದ್ಯರ ಬಳಿ ಹೋಗಿಬರುತ್ತೇನೆ. ಮೊನ್ನೆ ಅಂದರೆ ಮೇ.೨೮ರಂದು ಬೆಳಿಗ್ಗೆ ೯ರ ಸುಮಾರಿಗೆ ನಾನು-ನನ್ನ ಶ್ರೀಮತಿ ಮನೆಗೆ ಬೀಗ ಹಾಕಿಕೊಂಡು ಹುಬ್ಬಳ್ಳಿಗೆ ವೈದ್ಯರ ಬಳಿ ಚಿಕಿತ್ಸೆಗೆ ಹೋಗಿದ್ದೆವು. ಇತ್ತ ಇದನ್ನೇ ಕಾಯುತ್ತಿದ್ದರೆಂದು ಕಾಣುತ್ತದೆ! ಹಾಡು ಹಗಲು ಹೊತ್ತಿನಲ್ಲಿ ಕಳ್ಳರು ನಮ್ಮನೆಯ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಮನೆಯ ಬೆಳಕಿಂಡಿಯ ಕಬ್ಬಿಣದ ಸರಳುಗಳನ್ನು ಮುರಿಯಲು ಪ್ರತ್ನಿಸಿದ್ದಾರೆ, ಆದರೆ ಯಶಸ್ವಿಯಾಗಿಲ್ಲ. ಕಾಂಕ್ರೀಟ್ ಒಡೆಯುವ ಪ್ರಯತ್ನ ಮಾಡಿದ್ದಾರೆ. ಆ ಯತ್ನದಲ್ಲಿಯೂ ಅವರಿಗೆ ಫಲ ಸಿಕ್ಕಿಲ್ಲ. (ಇತ್ತೀಚೆಗೆ ನಗರದಲ್ಲಿ ಬೀಗ ಹಾಕಿರುವ ಮನೆಗಳ ಕಳವು ಸಾಮಾನ್ಯವಾಗಿಬಿಟ್ಟಿದೆ)
ಅಷ್ಟಕ್ಕೂ ಈ “ಬಡಪಾಯಿ ಪತ್ರಕರ್ತ/ಸಾಹಿತಿ”ಯ ಮನೆಯಲ್ಲಿ ಕಳ್ಳರಿಗೆ ದಕ್ಕುತ್ತಿದ್ದಾರು ಏನು?ಎಂದರೆ, ನೂರಾರು ಪ್ರಶಸ್ತಿ ಫಲಕಗಳು, ನೆನಪಿನ ಕಾಣಿಕೆಗಳು, ಕನ್ನಡ ಸಾರಸ್ವತ ಲೋಕದ ಅನೇಕ ಹಿರಿಯ ಲೇಖಕರು ಮತ್ತು ಕವಿಗಳ ಅಮೂಲ್ಯ ಕೃತಿಗಳು, ಅಮೂಲ್ಯ ಛಾಯಾಚಿತ್ರಗಳು (ಜಾಗತಿಕವಾಗಿ ಪ್ರಸಿದ್ಧವಾದ ಕೆಲವು ಚಿತ್ರಗಳು),ಹಸ್ತಪ್ರತಿಗಳು, ಅಪರೂಪದ ವಸ್ತುಗಳು, ಸಾಹಿತ್ಯ ರಚನೆಗೆ ಬಳಸಿದ ಹಳೆಯ ನೋಟ್ಬುಕ್ಗಳು, ಹಳೆಯ ಟಿವಿ, ಕಂಪೂಟರ್, ಕ್ಯಾಮೇರ ಹೊರತು ಪಡಿಸಿದರೆ ನನ್ನ ಮನೆಯಲ್ಲಿ ಚಿನ್ನಾಭರಣಗಳಾಗಲಿ, ಬೆಲೆಬಾಳುವ ಒಡವೆ-ವಸ್ತ್ರಗಳಾಗಲಿ ಇಲ್ಲ. ಇರುವುದು ಲೆಕ್ಕವಿಲ್ಲದಷ್ಟು ಪುಸ್ತಕಗಳು!. (ಇದ್ದ ಕೆಲವು ಚಿನ್ನಾಭರಣಗಳನ್ನು ನನ್ನ ಆಸ್ಪತ್ರೆಯ ಚಿಕಿತ್ಸೆಗೆಂದು ಶ್ರೀಮತಿ ಮಾರಿದ್ದಾಳೆ)ಆರ್ಥಿಕವಾಗಿ ಸಂಕಷ್ಟದ ಕಷ್ಟದ ಜೀವನವನ್ನು ನಡೆಸುತ್ತಿರುವ ನಾನು ನನ್ನ ಜೀವನವನ್ನು ಪತ್ರಿಕೋದ್ಯಮ ಮತ್ತು ಸಾಹಿತ್ಯ ಸೇವೆಗಾಗಿ ಮುಡಿಪಾಗಿಟ್ಟು ಕೆಲಸ ಮಾಡಿರುವೆ. ಇತ್ತೀಚಿನ ದಿನಗಳಲ್ಲಿ ಅನೇಕ ಬಾರಿ ಹಣಕಾಸಿನ ಮುಗ್ಗಟ್ಟಿನಿಂದ ಬಳಲಿರುವೆ.
“ನಾನು ಹೆಸರಿಗೆ ಬಡಪಾಯಿ ಮಾತ್ರವಲ್ಲ, ದೇಹವು ಕೂಡಾ ಅನಾರೋಗ್ಯದಿಂದ ಬಡವಾಗಿದೆ”. ಬಹಳಷ್ಟು ಜನಪ್ರಿಯ ಕವಿಗಳು ಮತ್ತು ಸಾಹಿತಿಗಳು ತಮ್ಮ ಬದುಕಿನುದ್ದಕ್ಕೂ ಬಡತನವನ್ನು ಅನುಭವಿಸಿದ್ದಾರೆ. ಸಾಹಿತ್ಯ ಸೇವೆಯನ್ನೇ ನಂಬಿ ಬದುಕುವುದು ಕಷ್ಟಕರವಾದಾಗ, ಜೀವನ ನಿರ್ವಹಣೆಗೆ ಪರದಾಡಿದ್ದಾರೆ. ಇದಕ್ಕೆ ನಾನು ಸಹ ಹೊರತಾಗಿಲ್ಲ. (ಈ ಬಗ್ಗೆ ಪದೇ ಪದೆ ಬರೆಯುತ್ತಾನೆ ಎಂದು ನಿಮಗೆ ಅನಿಸಬಹುದು!, ಬೇಸರವು ಆಗಿರಬಹುದು) ಆದರೆ ಇದು ವಾಸ್ತವದ ಕಟು ಸತ್ಯ. ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಆರ್ಥಿಕ ನೆರವಿಗಾಗಿ ಜನ ಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಮೊರೆ ಇಟ್ಟಿರುವೆ. ಇರಲಿ, ಅನೇಕರು ನೆರವಿನ ಭರವಸೆ ನೀಡಿದ್ದಾರೆ, ಕೆಲವರು ಸಹಾಯವನ್ನು ಮಾಡಿದ್ದಾರೆ.
ಇಂತ ಸಂಕಷ್ಟದ ಸ್ಥಿತಿಯಲ್ಲಿ ಬಡ ಸಾಹಿತಿಯ ಬದುಕು-ಬವಣೆ ಸಾಗಿರುವಾಗ ಯಾರೋ ಕಳ್ಳರು ಮನೆಯ ಕಳ್ಳತನಕ್ಕೆ ಪಯತ್ನಿಸಿದ್ದು ಒಂದು ಕಡೆ ಬೇಸರ ಮೂಡಿಸಿತು. ಆಸ್ಪತ್ರೆಯಿಂದ ಮಧ್ಯಾಹ್ನ ಮೂರರ ಸುಮಾರಿಗೆ ಮನೆಗೆ ಬಂದ ವೇಳೆ, “ಬೆಳಕಿಂಡಿಯ ಕೆಳಗಡೆ ನೆಲದಲ್ಲಿ ಮಣ್ಣು-ಕಲ್ಲು ಬಿದ್ದಿರುವುದನ್ನು ಗಮನಿಸಿದ ನನ್ನಾಕೆ ಕಳ್ಳನದ ಪ್ರಯತ್ನ ನಡೆದಿರುವುದನ್ನು ಗಮನಿಸಿ ಮಾಳಿಗೆ ಹತ್ತಿ ನೋಡಿ, ಮಾಳಿಗೆಯಲ್ಲಿ ಬೆಳಕಿಂಡಿಯ ಸರಳುಗಳನ್ನು ಕಿತ್ತಿರುವುದು, ಕಬ್ಬಿಣದ ಸರಳುಗಳನ್ನು ಮುರಿಯಲು ಕಳ್ಳರು ನಡೆಸಿ ಬಿಸಾಡಿದ ವಸ್ತುಗಳನ್ನು ಗಮನಿಸಿ ವಿಷಯ ತಿಳಿಸಿದಳು”.
ಎದ್ದು ಓಡಾಡದ ಸ್ಥಿತಿಯಲ್ಲಿರದ ನಾನು ಈ ಬಗ್ಗೆ ಆತ್ಮೀಯರಾದ ಪ್ರಭುಗೌಡ ಪಾಟೀಲರಿಗೆ ವಿಷಯ ತಿಳಿಸಿದೆ. ಅವರು ಪೊಲೀಸರ ಜೊತೆಗೆ ಮಾತನಾಡುವುದಾಗಿ ತಿಳಿಸಿದರು. ನಾನು ಯಾವುದಕ್ಕು ಇರಲಿ ಈ ಬಗ್ಗೆ ಪೊಲೀಸರಿಗೆ ತಿಳಿಸುವುದು ಒಳಿತು ಎಂದು, ಹಾವೇರಿ ಶಹರ ಪೊಲೀಸ್ಠಾಣೆಯ ಅಧಿಕಾರಿ ಮೂತಿಲಾಲ ಪವಾರ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ವಿಷಯ ಮುಟ್ಟಿಸಿದೆ. ಅವರು ಈ ಬಗ್ಗೆ ಪರಿಶೀಲಿಸುತ್ತೇನೆ ಎಂದು ನಾಲ್ಕಾರು ಪೊಲೀಸ್ ಸಿಬ್ಬಂದಿಯನ್ನು ಮನೆಗೆ ಕಳಿಸಿದ್ದರು. ಪೊಲೀಸ್ ಸಿಬ್ಬಂದಿಯವರು ಮನೆಗೆ ಭೇಟಿ ನೀಡಿ ಪರಿಶೀಲಿಸಿ, ಸುತ್ತ ಮತ್ತಲಿನ ಸಿಸಿ ಕ್ಯಾಮರಾಗಳನ್ನು ನೋಡುವುದಾಗಿ ತಿಳಿಸಿ ಹೋದರು.
ಈ ಕಳ್ಳತನ ಯತ್ನದ ಬಗ್ಗೆ ಶ್ರೀಮತಿ ಹೆದರಿ ಕಂಗಾಲಾಗಿದ್ದಾಳೆ, ಇದಕ್ಕೆ ಕಾರಣವು ಇದೆ. “ಈ ಹಿಂದೆ ೨೦೧೬ರಲ್ಲಿ ಮೋಟಾರ ಬೈಕ್ನಲ್ಲಿ ಬಂದಿದ್ದ ಇಬ್ಬರು ಖದೀಮರು ನನ್ನಾಕೆಯ ಮಾಂಗಲ್ಯಸರವನ್ನು ಮನೆಯ ಮುಂಭಾಗದಲ್ಲಿ ಕಿತ್ತುಕೊಂಡು ಹೋಗಿದ್ದರು”. ಈ ಬಗ್ಗೆ ದೂರು ದಾಖಲಿಸಲಾಗಿತ್ತು. ಕೆಲವೇ ದಿನಗಳಲ್ಲಿ ಪೊಲೀಸರು ಸರಕಳ್ಳರನ್ನು ಪತ್ತೆ ಹಚ್ಚಿದ್ದರು. ಈ ಘಟನೆ ಒಂದು ಕಡಯಾದರೆ, ೨೦೦೪ರಲ್ಲಿಯು ಸಹ ನಾವು ಮನೆಗೆ ಬೀಗಹಾಕಿಕೊಂಡು ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಮನೆಯಲ್ಲಿ ಕಳ್ಳತನಕ್ಕೆ ಮುಂದಾದ ವೇಳೆ ಮನೆಯಲ್ಲಿ ಏನು ಸಿಗದ ಕಾರಣಕ್ಕೆ, ಪ್ರಶಸ್ತಿಗಳನ್ನು ನೀಟಾಗಿ ಹೊಂದಿಸಿಟ್ಟು ೫೦೦ರೂಗಳನ್ನು ಇಟ್ಟು ಹೋಗಿದ್ದರು. ಇದೀಗ ನಡೆದಿರುವ ಈ ಘಟನೆಯಿಂದ ಮತ್ತಷ್ಟು ಹೆದರಿರುವ ನನ್ನ ಶ್ರೀಮತಿ ನಿದ್ದೆ ಮಾಡದೇ ಚಿಂತಿತಳಾಗಿದ್ದಾಳೆ, ಎಲ್ಲಿ ರಾತ್ರಿಯ ವೇಳೆ ಕಳ್ಳರು ಬರುವರೋ ಎಂದು!.
ಮನೆಯಲ್ಲಿ ಕಳ್ಳತನ ಮಾಡಲು ಏನೂ ಇಲ್ಲ, ಈ ಪುಸ್ತಕಗಳನ್ನು ಬಿಟ್ಟು. ಈ ವೇಳೆ ನನಗೆ ನೆನಪಾದದ್ದು ಹಿರಿಯ ಸಾಹಿತಿ ಹರಿಹರ ಪ್ರಿಯ ಅವರು ತಮಗೆ ದೊರೆತ ಸುಮಾರು ೧೫೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬೆಂಕಿ ಹಾಕಿ ಸುಟ್ಟಿದ್ದರು. ಆ ಘಟನೆ ಅಕ್ಷರ ಲೋಕದ ದೀನ ಪರಿಸ್ಥಿತಿಯ ಅನಾವರಣ. ಅರೆಗಳಿಗೆ ಮನಸ್ಸು ತಲ್ಲಣಗೊಂಡಿತ್ತು. ಕನ್ನಡ ನುಡಿ ಸೇವೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟು ೭೦ ಕ್ಕೂ ಹೆಚ್ಚು ಅತ್ಯಂತ ಶ್ರೇಷ್ಠ ಸಾಹಿತ್ಯದ ಪುಸ್ತಕಗಳನ್ನು ಬರೆದು ಸಾರಸ್ವತ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡ ಹಿರಿಯ ಜೀವಿ ಹರಿಹರ ಪ್ರಿಯ ಅವರು. ತಮ್ಮ ಬದುಕಿನುದ್ದಕ್ಕೂ ಸಾಹಿತ್ಯಕ್ಕೆ ತಮ್ಮ ಒಪ್ಪಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಸರ್ಕಾರಕ್ಕೆ ಮೊರೆಯಿಟ್ಟ ಅವರ ದೀನ ಧ್ವನಿ ಯಾರಿಗೂ ಕೇಳಿಸಲಿಲ್ಲ.
ಅವರು ಕೊಟ್ಟ ಮನವಿ ಪತ್ರಗಳು ಕಸದ ಪಾಲಾಗಿದ್ದವೇನೋ? ಇದರಿಂದ ವಿಚಲಿತರಾದ ಅವರು ಅಕ್ರೋಶಗೊಂಡು ತಾವು ಸರ್ಕಾರದಿಂದ ಪಡೆದಿದ್ದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸುಮಾರು ೧೫೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಬೆಂಕಿಗೆ ಹಾಕಿ ಸುಟ್ಟು ತಮ್ಮ ನೋವನ್ನು ತೊಡಿಕೊಂಡಿದ್ದರು. ಇಂತಹ ನೂರಾರು ಸಾಹಿತಿಗಳು ತಮ್ಮ ಜೀವನವನ್ನು ಬವಣೆಯಿಂದ ಸಾಗಿಸುತ್ತಿದ್ದಾರೆ. ಯಾರ ಬಳಿ ಹೇಳಿ ಕೊಂಡರೂ ಪರಿಹಾರ ಕಾಣದೇ ಸಂಕಷ್ಟದ ಜೀವನ ನಡೇಸುತ್ತಿದ್ದಾರೆ. ಕವಿ-ಸಾಹಿತಿಗಳು ಎಂದಿಗೂ ಐಶಾರಾಮಿ ಜೀವನ ಬಯಸಿದವರಲ್ಲ. ಜೀವನ ನಿರ್ವಹಣೆಗಾಗಿ ಅದರಲ್ಲೂ ಕನಿಷ್ಟ ಅರೋಗ್ಯ ಸೌಲಭ್ಯಗಾಗಿ ಅಂಗಲಾಚುತ್ತಿದ್ದಾರೆ.
ಸಮಾಜಕ್ಕೆ ಬೆಳಕು ನೀಡುವವರು ಸಾಹಿತಿಗಳು. ತಮ್ಮ ಲೇಖನಿಯ ಮೂಲಕ ಅದೆಷ್ಟೋ ಮಂದಿಯ ಬಾಳಿನಲ್ಲಿ ಹೊಸ ಆಶಯಗಳನ್ನು, ವಿಚಾರಗಳನ್ನು ತುಂಬುವ ಈ ಶಬ್ದಶಿಲ್ಪಿಗಳ ಬದುಕು ಹಲವು ಬಾರಿ ಕಷ್ಟ ಮತ್ತು ಬವಣೆಗಳ ಆಗರವಾಗಿರುತ್ತದೆ. ಸಾಹಿತ್ಯವನ್ನು ಜೀವವಾಗಿ ನಂಬಿ ಬದುಕುವ ಅನೇಕ ಕನ್ನಡ ಸಾಹಿತಿಗಳ ಬವಣೆ ಇಂದಿಗೂ ಒಂದು ಯಾತನಾಮಯ ಸತ್ಯ.ಕಷ್ಟಗಳ ಸರಮಾಲೆ, ಸೃಜನಶೀಲತೆ ಮತ್ತು ಹೊಟ್ಟೆಪಾಡು ಇವುಗಳ ನಡುವೆ ನಡೆಯುವ ನಿರಂತರ ಹೋರಾಟವೇ ಬಡ ಸಾಹಿತಿಯ ಬದುಕು.ಸಾಹಿತ್ಯ ರಚನೆಯಿಂದ ಬರುವ ಸಂಭಾವನೆ ಬಹುತೇಕ ಲೇಖಕರಿಗೆ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಪುಸ್ತಕ ಮಾರಾಟ ಕಡಿಮೆ ಇರುವುದು ಮತ್ತು ಪ್ರಕಾಶಕರಿಂದ ಸಕಾಲದಲ್ಲಿ ಹಣ ಬರದೇ ಇರುವುದು ಪ್ರಮುಖ ಸಮಸ್ಯೆ. ಕೇವಲ ಸಾಹಿತ್ಯವನ್ನೇ ನಂಬಿ ಬದುಕಲು ಸಾಧ್ಯವಾಗದೇ, ಅನಿವಾರ್ಯವಾಗಿ ಬೇರೆ ಉದ್ಯೋಗಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಅವರ ಸೃಜನಶೀಲ ಕಾರ್ಯಕ್ಕೆ ಸಮಯ ಮತ್ತು ಶಕ್ತಿ ಕಡಿಮೆಯಾಗುತ್ತದೆ.
ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದರೂ, ಅನೇಕ ಪ್ರತಿಭಾವಂತ ಬಡ ಸಾಹಿತಿಗಳು ಸರಿಯಾದ ಪ್ರೋತ್ಸಾಹ ಮತ್ತು ಗುರುತಿಸುವಿಕೆಯಿಂದ ವಂಚಿತರಾಗುತ್ತಾರೆ. ಪ್ರಚಾರದ ಬೆಳಕು ಶ್ರೀಮಂತ ಲೇಖಕರ ಮೇಲೆ ಮಾತ್ರ ಬೀಳುವುದು ಸಾಮಾನ್ಯ ಬಡತನದಿಂದಾಗಿ ತಮ್ಮ ಕುಟುಂಬದವರ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸಲು ಆಗದೆ ಮಾನಸಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಒಳಗಾಗುತ್ತಾರೆ. ಇದು ಅವರ ಬರವಣಿಗೆಯ ಮೇಲೆ ಪರಿಣಾಮ ಬೀರಬಹುದು. ಹೊಸ ಲೇಖಕರಿಗೆ ಅಥವಾ ಆರ್ಥಿಕವಾಗಿ ದುರ್ಬಲರಿರುವ ಸಾಹಿತಿಗಳಿಗೆ ತಮ್ಮ ಕೃತಿಗಳನ್ನು ಪ್ರಕಟಿಸುವುದು ಮತ್ತು ಜನರಿಗೆ ತಲುಪಿಸುವುದು ದೊಡ್ಡ ಸವಾಲಾಗಿದೆ.
ಸಾಹಿತಿ ಹಾಗೂ ಪತ್ರಕರ್ತರಿಗೆ, ಕಲಾವಿದರಿಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆಯುವಂತೆ ಆರೋಗ್ಯ ಕಾರ್ಡ್ ಕೊಡುವುದು, ಅಕಾಡೆಮಿಗಳು ಮತ್ತು ಸರ್ಕಾರಗಳು ಬಡ ಸಾಹಿತಿಗಳಿಗೆ ಮಾಸಿಕ ಪಿಂಚಣಿ ಅಥವಾ ಆರ್ಥಿಕ ಸಹಾಯ ಒದಗಿಸಬೇಕು. ಉಚಿತ ಆರೋಗ್ಯ ವಿಮೆ ಮತ್ತು ವಸತಿ ಯೋಜನೆಗಳಲ್ಲಿ ಆದ್ಯತೆ ನೀಡುವುದು ಅಗತ್ಯ ಜನರು ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವನ್ನು ಹೆಚ್ಚಿಸಿದರೆ ಲೇಖಕರಿಗೆ ನೇರವಾಗಿ ನೆರವಾಗುತ್ತದೆ. ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗೆ ಬಡ ಸಾಹಿತಿಗಳ ಕೊಡುಗೆ ಅಪಾರ. ಅವರ ಬದುಕಿನ ಕಷ್ಟಗಳು ಅಕ್ಷರ ಲೋಕದ ನೋವಿನ ಕಥೆ ಹೇಳುತ್ತವೆ. ಪತ್ರಕರ್ತರು-ಸಾಹಿತಿಗಳು ನಿರ್ಭಯವಾಗಿ, ನಿರಾತಂಕವಾಗಿ ತಮ್ಮ ಸೃಜನಶೀಲತೆಯನ್ನು ಮುಂದುವರಿಸಲು, ಸಮಾಜ ಮತ್ತು ಸರ್ಕಾರ ಸೂಕ್ತ ನೆರವು ನೀಡಬೇಕು. ನನ್ನ ಮನೆಯಲ್ಲಿ ಕಳ್ಳರು ಕಳ್ಳತನಕ್ಕೆ ನಡೆಸಿದ ಯತ್ನದ ಘಟನೆ ಈ ಲೇಖನ ಬರೆಯಲು, ಬಡ ಸಾಹಿತಿ-ಪತ್ರಕರ್ತರ ಬದುಕು-ಭವಣೆ ಎಂತದು ಎನ್ನುವುದಾಗಿದೆ.
ಮಾಲತೇಶ ಅಂಗೂರ
ಸಾಹಿತಿ/ಪತ್ರಕರ್ತ, ಹಾವೇರಿ.
sub-editor
kourava daily,
haveri

