
ಉತ್ತರ ಕರ್ನಾಟಕದ ನೈಜ ಸೊಗಡು, ಹಾಸ್ಯ ಹಾಗೂ ಬಾಂಧವ್ಯದ ಸುಂದರ ಕಾವ್ಯ “ಹುಲಿ ಬೀರ”
ಸಿನಿಮಾ ವಿಮರ್ಶೆ : ವೀರೇಶ್ ಹ್ಯಾಡ್ಲ
ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಉತ್ತರ ಕರ್ನಾಟಕದ ಮಣ್ಣಿನ ವಾಸನೆ, ಗ್ರಾಮೀಣ ಸೊಗಡು ಮತ್ತು ಅಲ್ಲಿನ ಜನರ ಭಾವನಾತ್ಮಕ ಜೀವನವನ್ನು ಕನ್ನಡಿಯಂತೆ ಹಿಡಿದಿಡುವ ‘ಹುಲಿ ಬೀರ’ ಚಿತ್ರವು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಚಿತ್ರವು ನೈಜ ಹಾಸ್ಯ, ಕೌಟುಂಬಿಕ ಮೌಲ್ಯಗಳು ಹಾಗೂ ಸಾಹಸದ ಸಮ್ಮಿಲನವಾಗಿದೆ. ಹುಲಿ ಬೀರ (Huli Beera)
ನಿರ್ದೇಶನ, ಕಥೆ & ಚಿತ್ರಕಥೆ ಮದರಂಗಿ ಮಲ್ಲಿಕಾರ್ಜುನ್
ನಿರ್ಮಾಪಕರಾದ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್. (ತುರುವೇಕೆರೆ), ಸುಜಾತ ಗಿರೀಶ್, ಸಾಯಿ ಸ್ಟಾರ್ ಸಿನಿಮಾಸ್ ಬ್ಯಾನರಿನ ಅಡಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ಹಳ್ಳಿಯ ಜೀವಾಳ ಮತ್ತು ನಾಯಕನ ಪಯಣವನ್ನು ಗಂಗಾವತಿ ಪ್ರಾಣೇಶ್ ಅವರ ವಿಶಿಷ್ಟ ನಿರೂಪಣೆಯೊಂದಿಗೆ (Voice-over) ಆರಂಭಗೊಂಡು ಪ್ರೇಕ್ಷಕರನ್ನು ನೇರವಾಗಿ ಕಥೆಯ ವಾತಾವರಣಕ್ಕೆ ಕರೆದೊಯ್ಯುತ್ತದೆ. ಊರಿನ ಶ್ರಮಜೀವಿಗಳು, ಕುಟುಂಬದ ನಡುವಿನ ಆತ್ಮೀಯ ಬಾಂಧವ್ಯ ಹಾಗೂ ಊರಿನ ಹಿತಕ್ಕಾಗಿ ನಿಲ್ಲುವ ನಾಯಕ ‘ಬೀರ’ನ ಕಥೆಯೇ ಚಿತ್ರದ ಜೀವಾಳ. ಸಮಾಜ ಹಾಗೂ ಊರಿನವರಿಂದ ಕಡೆಗಣಿಸಲ್ಪಟ್ಟು, ‘ಕೊನೆಯ ಆಯ್ಕೆ’ಯಾಗಿ ಕಾಣುವ ನಾಯಕ, ಮುಂದೆ ತನ್ನ ಬುದ್ಧಿವಂತಿಕೆ ಮತ್ತು ಧೈರ್ಯದಿಂದ ಇಡೀ ಊರಿನ ಉದ್ಧಾರಕ್ಕೆ ಹೇಗೆ ಕಾರಣನಾಗುತ್ತಾನೆ ಎಂಬುದನ್ನು ಕಥೆಯಲ್ಲಿ ಸ್ವಾರಸ್ಯಕರವಾಗಿ ಹೆಣೆಯಲಾಗಿದೆ. ‘ರೂರಲ್ ಸ್ಟಾರ್’ ಅಂಜನ್ ಗ್ರಾಮೀಣ ಯುವಕ ಬೀರನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆಕ್ಷನ್ ದೃಶ್ಯಗಳಲ್ಲಿನ ಅವರ ಎನರ್ಜಿ ಹಾಗೂ ಭಾವನಾತ್ಮಕ ಸನ್ನಿವೇಶಗಳಲ್ಲಿನ ಅವರ ಪಕ್ವ ಅಭಿನಯ ಮೆಚ್ಚುವಂತಿದೆ.
ನಾಯಕಿಯರಾದ ಚೈತ್ರ ತೋಟದ ಮತ್ತು ವನು ಪಾಟೀಲ್ ತಮ್ಮ ಸಹಜ ನಟನೆಯ ಮೂಲಕ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ತಮ್ಮ ಅನುಭವಪೂರ್ಣ ಅಭಿನಯದಿಂದ ಚಿತ್ರದ ತೂಕ ಹೆಚ್ಚಿಸಿದರೆ, ಮಲ್ಲು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಸ್ಥಳೀಯ ಕಲಾವಿದರ ಬಳಗವು ಚಿತ್ರದುದ್ದಕ್ಕೂ ಹಾಸ್ಯದ ಹೊಳೆಯನ್ನೇ ಹರಿಸಿದೆ. ‘ಹುಲಿ ಬೀರ’ ಕೇವಲ ಒಂದು ಕಮರ್ಷಿಯಲ್ ಆಕ್ಷನ್ ಅಥವಾ ಕಾಮಿಡಿ ಸಿನಿಮಾವಲ್ಲ; ಇದು ಮಣ್ಣಿನ ಮೌಲ್ಯಗಳು, ಸಂಸ್ಕೃತಿ ಮತ್ತು ಕುಟುಂಬದ ಬಾಂಧವ್ಯವನ್ನು ಎತ್ತಿಹಿಡಿಯುವ ನೈಜ ಪ್ರಯತ್ನ. ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ಮನಸಾರೆ ನಗಿಸುವ ಹಾಸ್ಯವನ್ನು ಬಯಸುವ ಸಿನಿಮಾ ಪ್ರಿಯರು ಕುಟುಂಬ ಸಮೇತರಾಗಿ ವೀಕ್ಷಿಸಬಹುದಾದ ಉತ್ತಮ ಕೌಟುಂಬಿಕ ಮನರಂಜನಾತ್ಮಕ ಚಿತ್ರ ಹುಲಿಬೀರ.

