
ನವದೆಹಲಿ: ದೇಶಾದ್ಯಂತ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಮೇ 1 ಶುಕ್ರವಾರ ಜಾರಿಗೆ ಬರುವಂತೆ 993 ರೂ. ಹೆಚ್ಚಿಸಲಾಗಿದೆ. ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಲಾಗಿದೆ.
ಫೆಬ್ರವರಿ 28ರಂದು ಸಂಘರ್ಷ ಭುಗಿಲೆದ್ದ ನಂತರ ಈಗ ಮೂರನೇ ಬಾರಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಳವಾಗಿದೆ. ಮಾರ್ಚ್ 1ರಂದು 144 ರೂ.ಗಳಷ್ಟು ಏರಿಕೆ ಮಾಡಲಾಗಿದ್ದು, ಬಳಿಕ ಮತ್ತೆ ಏಪ್ರಿಲ್ 1 ರಂದು 19 ಕೆಜಿ ಸಿಲಿಂಡರ್ ದರವು ಸುಮಾರು 200 ರೂ. ಹೆಚ್ಚಳವಾಗಿತ್ತು.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಇಂದಿನಿಂದ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ 993 ರೂ.ಗಳಷ್ಟು ಏರಿಕೆಯಾಗಿದೆ. ಇಂದಿನಿಂದ, ಈ ಸಿಲಿಂಡರ್ ಬೆಲೆ 3,071 ರೂ. ಆಗಿದ್ದು, ಈ ಹಿಂದಿನ ಬೆಲೆ 2,078ರಷ್ಟಿತ್ತು. ಮುಂಬೈ ಮಹಾನಗರದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯೂ ಏರಿಕೆಯಾಗಿದೆ. ಇಲ್ಲಿ, ಸಿಲಿಂಡರ್ ಬೆಲೆ 3,024 ರೂ.ಗೆ ಏರಿಕೆಯಾಗಿದೆ. ಹಿಂದೆ, 2,031 ರೂ. ಆಗಿತ್ತು.
ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 994 ರೂ.ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆ ತಕ್ಷಣದಿಂದ ಜಾರಿಗೆ ಬಂದಿದ್ದು, ಸಿಲಿಂಡರ್ 3,202 ರೂ.ಗೆ ದೊರೆಯುತ್ತಿದೆ. ಹಿಂದೆ, ಇದರ ಬೆಲೆ 2,208 ರೂ. ಇತ್ತು. ಚೆನ್ನೈಗೆ ಸಂಬಂಧಿಸಿದಂತೆ, ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ 3,237 ರೂ.ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಹಿಂದೆ, ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳು ರೂ. 2,246.50ಕ್ಕೆ ಮಾರಾಟ ಮಾಡಲಾಗುತ್ತಿತ್ತು.
ಇಂದಿನಿಂದ ಹೊಸ ನಿಯಮಗಳು ಜಾರಿಗೆ: ಮೇ 1ರಿಂದ ಜಾರಿಗೆ ಬರುವಂತೆ, ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ವಿತರಣೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಗ್ರಾಹಕರ ಅನುಕೂಲ ಹಾಗೂ ಪೂರೈಕೆ ವ್ಯವಸ್ಥೆಯ ಪಾರದರ್ಶಕತೆ ಹೆಚ್ಚಿಸಲು ಮೇ 1ರಿಂದ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ.
ಭದ್ರತಾ ಕ್ರಮವಾಗಿ, ವಿತರಣಾ ದೃಢೀಕರಣ ಕೋಡ್ (DAC) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಗ್ಯಾಸ್ ವಿತರಣೆ ವೇಳೆ ಗ್ರಾಹಕರ ಮೊಬೈಲ್‌ಗೆ OTP ಕಳುಹಿಸಲಾಗುತ್ತದೆ. ಈ OTPಯನ್ನು ವಿತರಣಾ ಸಿಬ್ಬಂದಿಗೆ ನೀಡಿದ ನಂತರವೇ ಸಿಲಿಂಡರ್ ಹಸ್ತಾಂತರವಾಗುತ್ತದೆ. ಇದರಿಂದ ವಿತರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಲಿದೆ.
ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, ಸಿಲಿಂಡರ್ ಬುಕ್ಕಿಂಗ್ ನಡುವಿನ ಅವಧಿ. ನಗರ ಪ್ರದೇಶಗಳಲ್ಲಿ ಕನಿಷ್ಠ 25 ದಿನಗಳ ಅಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಅಂತರವನ್ನು ನಿಗದಿಪಡಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಅದೇ ರೀತಿ, ಒಂದೇ ಮನೆಯಲ್ಲಿ ಪೈಪ್ಡ್ ಗ್ಯಾಸ್ (PNG) ಮತ್ತು LPG ಎರಡನ್ನೂ ಒಂದೇ ಸಮಯದಲ್ಲಿ ಬಳಸಲು ಅವಕಾಶ ಇರುವುದಿಲ್ಲ. ಈಗಾಗಲೇ ಎರಡೂ ಸಂಪರ್ಕ ಹೊಂದಿರುವವರು ಒಂದನ್ನು ತ್ಯಜಿಸಬೇಕಾಗುತ್ತದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇದನ್ನು ಪೂರ್ಣಗೊಳಿಸದ ಗ್ರಾಹಕರು ಸಬ್ಸಿಡಿ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ನಿಯಮಗಳು ಗ್ರಾಹಕರ ಸುರಕ್ಷತೆ ಮತ್ತು ಸರಬರಾಜು ವ್ಯವಸ್ಥೆಯ ಸುಧಾರಣೆಗೆ ನೆರವಾಗಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

