
ಹಾವೇರಿಜಿಲ್ಲೆಯಲ್ಲಿ ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ-ಸೂಕ್ತ ಬಂದೋಬಸ್ತ-ಎಸ್ ಪಿ ಯಶೋಧಾ
ಹಾವೇರಿ: ಜಿಲ್ಲೆಯಾಧ್ಯಂತ ಸೆ. ೧೪ ರಿಂದ ತ ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಆ ಪ್ರಯುಕ್ತ ಜಿಲ್ಲೆಯಲ್ಲಿ ಸುಮಾರು ೨೩೧೫ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದು, ಸುಮಾರು ೦೧ ತಿಂಗಳವರೆಗೆ ವಿವಿಧ ದಿನಾಂಕಗಳಂದು ಗಣೇಶ ವಿಸರ್ಜನೆ ಪ್ರಕ್ರಿಯೆ ನಡೆಯುತ್ತದೆ. ಹಬ್ಬದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಹಾಗೂ ಶಾಣಾ ಮಟ್ಟದಲ್ಲಿ ಪ್ರತ್ಯೇಕವಾಗಿ ಗಣೇಶ ಆಯೋಜಕರ ಹಾಗೂ ವಿವಿಧ ಕೋಮಿನ ಮುಖಂಡರನ್ನು ಒಳಗೊಂಡ ಸೌಹಾರ್ದ ಸಭೆಗಳನ್ನು ಕೈಗೊಂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ ತಿಳಿಸಿದ್ದಾರೆ.
ಪ್ರಸ್ತುತ ವರ್ಷದ ಗಣೇಶ ಬಂದೋಬಸ್ತ ಕರ್ತವ್ಯಕ್ಕೆ ಜಿಲ್ಲೆಯಿಂದ ಎಸ್ಪಿ, ಹೆಚ್ಚುವರಿ ಎಸ್ಪಿ, ಒ ಈ ಕೆಳಕಂಡಂತೆ ಅಧಿಕಾರಿ/ಸಿಬ್ಬಂದಿ ಜನರು, ಗೃಹ ರಕ್ಷಕ ಸಿಬ್ಬಂದಿಗಳು, ಪ್ರಹಾರ ದಳಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ಐವರು ಡಿಎಸ್ಪಿ, ೧೫ ಸಿಪಿಐ/ಪಿಐ,೪೫ ಪಿಎಸ್ಐ, ೫೦ ಎಎಸ್ಐ, ೫೦೦ ಎಚ್ಸಿ/ಪಿಸಿ,೪೦೦ಹೋಮ್ ಗಾರ್ಡ, ೦೯ ಡಿಎಆರ್, ೧ಕಿವ್ಆರಟಿ ನೇಮಿಸಲಾಗಿದೆ.
ಈಗಾಗಲೇ ಆಯೋಜಕರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾಲಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಸಿಂಗಲ್ ವಿಂಡೋ ಸಿಸ್ಟಮ್ ಜ್ಯಾರಿ ತರಲಾಗಿದೆ. ಗಣೇಶ ವಿಸರ್ಜನಾ ಸ್ಥಳಗಳ ಸ್ವಚ್ಛತೆ, ಲೈಟಿಂಗ್ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಕೋರಲಾಗಿದೆ. ಜಿಲ್ಲೆಯಲ್ಲಿ ಗಣೇಶ ಹಬ್ಬ ಪೂರ್ಣಗೊಳ್ಳುವವರೆಗೆ ಡಿಜೆ ಸೌಂಡ್ ಹಾಗೂ ಹೆಚ್ಚು ಶಬ್ದ ಹೊರಸೂಸುವ ಸಾಧನಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಜಿಲ್ಲೆಯಲ್ಲಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆಗಳ ವಿವಿಧ ದಿನಗಳಂದು ಸಂಬಂಧಪಟ್ಟ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜಿಲ್ಲೆಯ ಎಲ್ಲ ಕಂದಾಯ ಅಧಿಕಾರಿಗಳು ಸ್ಥಳೀಯವಾಗಿ ಹಾಜರಿರುವಂತೆ ಕೋರಲಾಗಿದೆ. ಬ್ಯಾನರ್, ಬಂಟಿಂಗ್ಸ್, ಶಾಮಿಯಾನ ಹಾಗೂ ಪ್ರಿಂಟರ್ಸ್ ವ್ಯವಸ್ಥಾಪಕರೊಂದಿಗೆ ಸಭೆ ಮಾಡಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಹಬ್ಬದ ಹಿನ್ನಲೆಯಲ್ಲಿ ಇತರೇ ಇಲಾಖೆಗಳ ಸಹಕಾರ ಕೋರಲಾಗಿದೆ.ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಹಬ್ಬದ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ, ವಾಚ್ ಟವರ್, ಪಿಎ ಸಿಸ್ಟಮ್ ಹಾಗೂ ಲೈಟಿಂಗ್ ವ್ಯವಸ್ಥೆ ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಹಾಗೂ ಸುಳ್ಳು ಸಂದೇಶಗಳನ್ನು ರವಾನಿಸುವವವರ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ.

