
ಕಗ್ಗತ್ತಿಲಿನ ನಿಂದ ಬೆಳಕಿನನೆಡೆಗೆ ಬರಲು ಹಾತೊರೆಯುತ್ತಿದೆ ಮನಸ್ಸು……
“ಜೀವನದಲ್ಲಿ ಎದುರಾದ ಅನಿರೀಕ್ಷಿತ ಆಘಾತ ನನ್ನ ಬದುಕನ್ನು ಅಲುಗಾಡಿಸಿದೆ. ಬೆಳಕು ಕಾಣದೇ ಹಗಲಿನಲ್ಲಿ ಕತ್ತಲು ಆವರಿಸಿದ ಜೀವನ ಮುಂದೆ ಹೇಗೆ?. ಹಾಸಿಗೆಯ ಅಪ್ಪುಗೆಯಿಂದ ಬಿಡುಗಡೆ ಯಾವಾಗ? ಬೆಳಕಿನ ಬೆರಗನ್ನು ನೋಡುವುದು ಯಾವಾಗ? ಎನ್ನುವ ಚಿಂತೆಯಲ್ಲಿ ದಿನ ಕಳೆಯುತ್ತಿವೆ”. “ಆಗೊಮ್ಮೆ, ಈಗೊಮ್ಮೆ ನನ್ನನ್ನು ಕಾಣಲು, ಆರೋಗ್ಯ ವಿಚಾರಿಸಲು ಬರುವ ಸ್ನೇಹಿತರು, ವ್ರತ್ತಿ ಬಾಂಧವರು, ಬಂಧುಗಳು, ಸಮಾಜದ ಬಾಂಧವರು, ಹಿತೈಷಿಗಳು, ಗುರುಗಳು, ಮಾರ್ಗದರ್ಶಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪರಿಚಿತ ವೈದ್ಯರು, ಅಪರಿಚಿತರು, ಪರಿಚಿತರು ಹೇಳುವ ಧೈರ್ಯದ ಮಾತುಗಳು ಕೆಲವೊಮ್ಮೆ ನನ್ನ ಆತ್ಮವಿಶ್ವಾಸ ಹೆಚ್ಚಿಸಿವೆ”.
“ಬರುವವರು ತರುವ ಹಣ್ಣು, ಬ್ರೆಡ್, ಬಿಸ್ಕತ್ ನಾನು ಬಾಯಿ ಇದ್ದು ಸಹ ತಿನ್ನುವಂತಿಲ್ಲ!. ಈಗಾಗಲೇ ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿರುವ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ಅನ್ನದ ಅಗಳನ್ನು ಮುಟ್ಟವಂತಿಲ್ಲ. ಇನ್ನು ಹಣ್ಣುಗಳಲ್ಲಿ ಸಕ್ಕರೆ ಅಂಶ ಇರುವ ಕಾರಣಕ್ಕಾಗಿ ಹಣ್ಣುಗಳನ್ನು ಸವಿಯುವಂತಿಲ್ಲ”. ಶುಗರ್ ಕಂಟ್ರೋಲ್ ನಲ್ಲಿ ಇರದಿದ್ದರೇ ಗಾಯ ಬೇಗನೆ ಮಾಯುವುದಿಲ್ಲ ಎಂದು ವೈದ್ಯರು ನೀಡಿದ ಎಚ್ಚರಿಕೆಯ ಮಾತುಗಳು ಒಂದು ಕಡಯಾದರೆ, ಸದಾ ನನ್ನ ಬೆಂಗಾವಲಾಗಿರುವ ನನ್ನ ಪ್ರೀತಿಯ ಮಡದಿ ನನ್ನ ಅರ್ಧಂಗಿನಿ ಶ್ರೀಮತಿ ಲಕ್ಷ್ಮೀ ಮೂರು ಹೊತ್ತು ಬಿಸಿಯಾದ ರೊಟ್ಟಿ ಸುಟ್ಟು ಬಲವಂತವಾಗಿ ಊಟ ಬಡಿಸುತ್ತಾಳೆ. ಸೊಪ್ಪು, ಸೋದಿ, ತರಕಾರಿ ಊಟದ ಭಾಗವಾಗಿದೆ. ನುಚ್ಚಿನ ಅಂಬಲಿ, ಕೆಲವೊಮ್ಮೆ ರಾಗಿರೊಟ್ಟಿ, ಅಂಬಲಿ, ನವಣಕ್ಕಿ, ಸಾವಕ್ಕಿ, ಭರಗಿನ ಅನ್ನ , ಕೆಂಪಕ್ಕಿ ಅನ್ನ ಊಟದ ಸ್ವಲ್ಪ, ಸ್ವಲ್ಪ ಭಾಗವಾಗಿದೆ.
ಇನ್ನು ಮಗಳ ಬಗ್ಗೆ ಹೇಳಲೇ ಬೇಕು, “ಪ್ರೀತಿಯ ಪುತ್ರಿ ರೇಣುಕಾ ತಾಯಿ-ತಂದೆಯ ಆನಂದ, ಮತ್ತು ಮನೆಯ ಬೆಳಕು”. “ಮಗಳು ತೋರುವ ಅಗಣತಿ ಪ್ರೀತಿ ಬಲೆಕಟ್ಟಲಾರದ್ದು, ಅವಳು ತನ್ನ ತಾಯಿಯ ಕನ್ನಡಿ ಮತ್ತು ಅಪ್ಪನ ಮುದ್ದು ಪ್ರಪಂಚವಾಗಿ, ನನ್ನ ಅವ್ವನ ಪ್ರತಿರೂಪವಾಗಿ ಪ್ರೀತಿ-ವಿಶ್ವಾಸಗಳನ್ನು ಹಂಚಿಕೊಳ್ಳುತ್ತಾ, ಸಂಬಂಧಗಳನ್ನು ಬೆಸೆದು ಬದುಕಿಗೆ ಸಾರ್ಥಕತೆ ತಂದಿದ್ದಾಳೆ”. “ಮಗಳ ಪ್ರೀತಿ ತಾಯಿಯ ಮಮಕಾರದ ಸೇತುವೆಯಾಗಿದ್ದರೆ, ಅಪ್ಪನಿಗೆ ಹೆಮ್ಮೆಯ ಸಾಧನೆಯಾಗಿದೆ. ಮಗಳು ಬರೀ ಮಗಳಲ್ಲ, ಕಷ್ಟ -ಸುಖ ಹಂಚಿಕೊಳ್ಳುವ ಅಪ್ಪನ ಮುದ್ದು ಪ್ರಪಂಚ. ತಂದೆಯೊಂದಿಗೆ ವಿಶೇಷ ಗೌರವ ಮತ್ತು ಪ್ರೀತಿಯ ಬಂಧ ಹೊಂದಿರುವ ಅವಳು ಬಾಳಿನ ಶಕ್ತಿಯಾಗಿ ಅಪ್ಪನಿಗೆ ಪ್ರೀತಿಯನ್ನು ತೋರುತ್ತಾಳೆ”.
ನಾನು “ಅನಾರೋಗ್ಯಕ್ಕೆ ಒಳಗಾಗಿ ಹಾವೇರಿ ಮತ್ತು ಹುಬ್ಬಳ್ಳಿಯ ಆಸ್ಪತ್ರೆಗಳಲ್ಲಿ ಕೋಮಾ ಸ್ಥಿತಿಯಲ್ಲಿದ್ದಾಗ, ಆತಂಕಕ್ಕೆ ಒಳಗಾಗಿದ್ದ ಮಗಳು ರೇಣುಕ ನನ್ನ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಹೊಂದಿಸಲು ಬಂಧು-ಬಾಂಧವರನ್ನು, ತನ್ನ ಗೆಳತಿಯರನ್ನು ಸಂಪರ್ಕಿಸಿ ಅವರಿಂದ ಹಣ ಪಡೆದು, ಏಷ್ಟೇ ಖರ್ಚಾದರು ಸರಿ ನಮ್ಮ ಅಪ್ಪಾಜಿ ಗುಣಮುಖರಾದರೆ ಸಾಕು” ಎಂದು ಅವಳು ತೋರಿದ ಧೈರ್ಯ ನನ್ನಲ್ಲಿ ಸಾರ್ಥಕ ಭಾವನೆ ಮೂಡಿಸಿದೆ. “ಮಗಳು ಮನೆಯ ಸೌಂದರ್ಯ, ಪ್ರೀತಿಯ ಖನಿ ಮತ್ತು ಮಮಕಾರದ ಪ್ರತೀಕ. ತಂದೆ ಆರೋಗ್ಯ, ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾ, ಅಪ್ಪಾಜಿಯ ಬಗ್ಗೆ ಮಗಳು ತೋರುವ ಪ್ರೀತಿಯ ಸೆಲೆ ಬತ್ತದ ವರತೆಯಂತಿದೆ”.
ಇನ್ನು “ಪುತ್ರ ಬಸವರಾಜನದು ಸೂಕ್ಷ್ಮ ಸ್ವಭಾವ, ಆತ ನನ್ನ ಅನಾರೋಗ್ಯದ ಬಗ್ಗೆ ಒಳಗೊಳಗೆ ಕೊರಗಿದ್ದಾನೆ. ತಾನು ಕೆಲಸ ಮಾಡುವಲ್ಲಿ ನನ್ನ ಚಿಕಿತ್ಸಗೆಂದು ಸಾಲ ಪಡೆದ ಹಣವನ್ನು ತನ್ನ ತಾಯಿಯ ಕೈಗಿತ್ತು, ಅಪ್ಪನ ಬಗ್ಗೆ ತನಗಿರುವ ಕಾಳಜಿಯನ್ನು ತೋರಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಮಾತ್ರೆಗಳನ್ನು ತರುವುದು, ನನಗೆ ಹೆಗಲಾಗಿ ನಿತ್ಯ ಕರ್ಮಗಳನ್ನು ಮಾಡಿಸಲು ಹಿತ್ತಲಕ್ಕೆ ಕರೆದುಕೊಂಡು ಹೋಗುವಲ್ಲಿ ಯಾವುದೇ ಬೇಸರವಿಲ್ಲದೇ ತನ್ನ ತಾಯಿಗೆ ಕೈಜೋಡಿಸಿ ತನ್ನ ಜವಾಬ್ದಾರಿ ತೋರುತ್ತಿದ್ದಾನೆ.
“ಪ್ರತಿಯೊಂದಕ್ಕೂ ಬೇರೆಯವರ ನೆರವು ಬೇಕೆ ಬೇಕು”!!. “ಕಳೆದ ಕೆಲವು ತಿಂಗಳಿಂದ ನನ್ನ ಸೇವೆ ಮಾಡಿ, ಮಾಡಿ ಬೇಸತ್ತಿರುವ! ನನ್ನ ಶ್ರೀಮತಿ ಕೆಲವೊಮ್ಮೆ ಬೇಸರ ಮಾಡಿಕೊಳ್ಳುವುದು ಉಂಟು!. ಆದರೆ ಮುಂದೆ ಕೆಲವೆ ನಿಮೀಷಗಳಲ್ಲಿ ಸಾವರಿಸಿಕೊಂಡು ಮತ್ತೆ ನನಗೆ ಹೆಗಲಾಗುತ್ತಾಳೆ. ಧೈರ್ಯದಿಂದ ಇರಿ ಎಷ್ಟೇ ಕಷ್ಟ ಬಂದರೂ ಹೆದರಬೇಡಿ ಎನ್ನುವ ಅವಳ ಆತ್ಮವಿಶ್ವಾಸ ಮಾತುಗಳು, ಅವಳು ನನ್ನ ಆರೋಗ್ಯದ ಬಗ್ಗೆ ತೋರಿಸುವ ಕಾಳಜಿ, ಕಕ್ಕುಲತೆ , ಮುಂಜಾನೆ, ಮಧ್ಯಾಹ್ನ, ರಾತ್ರಿ ನೀಡುವ ಮಾತ್ರೆಗಳು ಗಂಟಲಲ್ಲಿ ಇಳಿಯುತ್ತವೆ. ಮಗುವಿನ ಹಾಗೆ ನನ್ನನು ಜೋಪಾನ ಮಾಡುತ್ತಿದ್ದಾಳೆ”.
ನಾನು ಮನೆಯವರಿಗೆ, ಸಮಾಜಕ್ಕೆ ಬಾರವಾಗಿರುವೆನೆ? ಎನಿಸುವುದು ಉಂಟು! ಎದ್ದು ಓಡಾಡದ ಸ್ಥಿತಿ, ಬಾಯಾರಿಕೆಯಾದಾಗ ಒಂದ ಗ್ಲಾಸ್ ನೀರು ಕುಡಿಯಲು ಸಹ ಬೇರೆಯವರ ನೆರವು ಬೇಕು. ಇತ್ತೀಚೆಗೆ ವಾಕರ್ ಹಿಡಿದು ಅದರ ಸಹಾಯದಿಂದ ನಡೆದಾಡಲು ಪ್ರಯತ್ನಿಸುತ್ತಿರುವೆ.
“ಸದಾ ಪರಿಸರದ ಜೊತೆಯಲ್ಲಿ ಸಮಯ ಕಳೆಯುತ್ತಿದ್ದ ನನಗೆ ಮನೆಯಿಂದ ಹೊರಗೆ ಬರಲಾರದ ಸ್ಥಿತಿ ಚಿತ್ರಹಿಂಸೆಯಾಗಿದೆ. ಮಲಗಿದರೆ ಸರಿಯಾಗಿ ನಿದ್ದೆ ಬರುವುದಿಲ್ಲ. ಟಿವಿ, ಮೊಬೈಲ್, ಫೇಸ್ ಬುಕ್ ಹಾಗೂ ಪುಸ್ತಕಗಳು ನನ್ನ ಸಂಗಾತಿಯಾಗಿವೆ”. “ಕೆಲವು ಸ್ನೇಹಿತರು ಆಗಾಗ ಮೊಬೈಲಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಾರೆ. ಇನ್ನು ಕೆಲವರು ಕರೆ ಮಾಡಿದರೂ ಸಹ ಕರೆ ಸ್ವೀಕರಿಸುವುದಿಲ್ಲ!.(ಅವರವರ ಕಷ್ಟಗಳು, ಒತ್ತಡಗಳು ಇರುವ ಕಾರಣ ಇರಬಹುದು! ) ಇನ್ನು ಕೆಲವರು ಕಾಣಲು ಬರುವುದಾಗಿ ಹೇಳಿ, ತಿಂಗಳು ಉರುಳಿದರೂ ಸಹ ಪತ್ತೆಯೇ ಇರುವುದಿಲ್ಲ!. ಇರಲಿ ಇವೆಲ್ಲ ಸಹಜ”!.
“ಮಲಗಿದಲ್ಲಿ ಕಣ್ತೆರೆದು ನೋಡಿದಾಗ ಎಲ್ಲೆಲ್ಲೂ ಕತ್ತಲು, ಕಗ್ಗತ್ತಲು……!!!! ಏನು ಕಾಣದಂತೆ ಇರುತ್ತದೆ. ಆದರೆ ಆ ಕತ್ತಲಿನಲ್ಲಿ, ಕತ್ತಲನ್ನು ನೋಡುವ ಕ್ಷಮತೆಯ ಶಕ್ತಿ ನನ್ನಲ್ಲಿ ಕಡಿಮೆಯಾಗಿದೆಯೋನೋ? ಎನಿಸುತ್ತಿದೆ”. “ಯಾವಾಗಲೂ ನೋವು ಮಾತ್ರ ಕಾಣುತ್ತಿರುತ್ತದೆ , ಕಾಡುತ್ತಿರುತ್ತದೆ ಎಂದಾದರೆ…ಅದನ್ನು ಗುರುತಿಸಲು ನೋವುಗಳು ಇಲ್ಲದ, ದೇಹದ ಭಾಗಗಳು ಇನ್ನು ಜೀವಂತವಾಗಿದೆ ಎಂದು ತಿಳಿದುಕೊಂಡಿರುವೆ”. “ಜೀವನ ಕತ್ತಲನ್ನು ಕಾಣುವಂತಾಗಿರಬೇಕು, ನೋವಿಲ್ಲದ ಭಾಗವನ್ನು ಅರಿಯುವಂತೆ ಆಗಿರಬೇಕು”. “ಒಂದು ಪರಿಮಿತಿಗಿಂತ ಜಾಸ್ತಿ ನೋವು ಅನುಭವಿಸಿದ ವ್ಯಕ್ತಿ ಹೆಚ್ಚಾಗಿ ಮೌನವಾಗುತ್ತಾನೆ. ನೋವನ್ನು ಹಂಚಲು ಸಾಧ್ಯ, ಸಹಿಸಲು ಸಾಧ್ಯ. ಕೆಲ ಸಮಯದ ನಂತರ ಗೊತ್ತಾಗುತ್ತದೆ ನನ್ನ ನೋವುಗಳು ನನ್ನದು ಮಾತ್ರ ಎಂದು”.
“ನನ್ನ ಆರೋಗ್ಯ ಕೊಂಚಮಟ್ಟಿಗೆ ಸುಧಾರಿಸುವಲ್ಲಿ ಹಾವೇರಿ ಮತ್ತು ಹುಬ್ಬಳ್ಳಿಯ ವೈದ್ಯರ ಶ್ರಮ ಅಪಾರ. ಚಿಕಿತ್ಸೆಗೆ ಹಲವು ಲಕ್ಷಗಳು ಖರ್ಚಾಗಿವೆ. ನಿತ್ಯ ಮಾತ್ರೆ, ಚಿಕಿತ್ಸೆಗೆ ಹಣ ನೀರಿನಂತೆ ಖರ್ಚಾಗುತ್ತಿದೆ. ಕಳೆದ ಆರು ತಿಂಗಳಿನಿಂದ ಹಾಸಿಗೆ ಹಿಡಿದಿರುವ ನನಗೆ ದುಡೆಮೆಯ ಮಾರ್ಗ ಬಂದ್ ಆಗಿದೆ!. ನೋವಿನಲ್ಲಿಯೂ ಮಿತ್ರರ ಸಹಾಯದಿಂದ ಇತ್ತೀಚೆಗೆ ಗಣಕಯಂತ್ರದಲ್ಲಿ ಸಣ್ಣದಾಗಿ ಕೆಲಸ ಆರಂಭಿಸಿರುವೆ”.
“ನನ್ನ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಕೆಲವು ಹಿರಿ-ಕಿರಿಯ ಮಿತ್ರರು, ಬಂಧುಗಳು, ಆಪ್ತರು ಇವ ನಮ್ಮವ, ಇವ ನಮ್ಮವ” ಎಂದು ನನ್ನ ಸಹಾಯಕ್ಕೆ, ನೆರವಿಗೆ ಮುಂದಾಗಿದ್ದಾರೆ. “ಊರೆಲ್ಲ ನೆಂಟರು ಕೇರಿಯೆಲ್ಲ ಬಂಧುಗಳು” ಎನ್ನುವಂತೆ ಸಚಿವರು, ಶಾಸಕರು, ಮಾಜಿ ಶಾಸಕರು, ಲೋಕಸವೇವಾ ಆಯೋಗದ ಮಾಜಿ ಸದಸ್ಯರು, ಮಠಾಧೀಶರು, ಗಣ್ಯರು, ಸಾಹಿತಿಗಳು, ಪತ್ರಕರ್ತರು, ಸಂಪಾದಕರು, ಮಹಿಳಾ ಸಂಘಗಳ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರೈತ ಸಂಘದ ಮುಖಂಡರು, ವಿವಿಧ ಸಮಾಜದ ಬಂಧುಗಳು, ಉಪನ್ಯಾಸಕರು, ಶಿಕ್ಷಕರು, ಅಧಿಕಾರಿಗಳು, ಒಬ್ಬರೇ, ಇಬ್ಬರೆ….. ಎಲ್ಲರೂ ಆಗಮಿಸಿ ನನ್ನ ಆರೋಗ್ಯ ವಿಚಾರಿಸಿದ್ದಾರೆ. ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ತಮ್ಮ ಕೈಲಾದ ಸಹಾಯ ಮಾಡಿದ್ದಾರೆ”.
“ಗೆಳೆಯರಾದ ಮಹಾಂತೇಶ ಹೊಳೆಮ್ಮನವರ, ಎಸ್.ಎಸ್.ಮದನಕುಮಾರ ಮತ್ತಿತರರು, ಹೆಸರು-ಪ್ರಚಾರ ಬಯಸದ ಗೆಳೆಯರು ನನ್ನ ನೆರವಿಗೆ ಧಾವಿಸುವಂತೆ ನನ್ನ ಪೋಟೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿದ್ದಾರೆ”. ಕೆಲವರು ನೆರವಿಗೆ ಮುಂದಾಗಿದ್ದಾರೆ. “ಹುಬ್ಬಳ್ಳಿಯ ಬಾಲಜಿ ಲಿಂಬ್ ಫಿಟಿಂಗ್ ಸೆಂಟರ್ಗೆ ಭೇಟಿ ನೀಡಿ ಕೃತಕ ಕಾಲನ್ನು ಹಾಕಿಸಲು ವಿಚಾರಿಸಿದ್ದು, ಕೃತಕ ಕಾಲು ಅಳವಡಿಸಿಲು ೧.೨೫ಲಕ್ಷರೂ ಹಣ ವೆಚ್ಚತಗಲುತ್ತದೆ” ಎಂದು ಅವರು ತಿಳಿಸಿದ್ದಾರೆ. ಚಿಕಿತ್ಸೆಗೆ ಮಾಡಿರುವ ಸಾಲವೇ ಬೆಟ್ಟದಷ್ಟಿರುವಾಗ ಕೃತಕ ಕಾಲಿಗೆ ಲಕ್ಷಾಂತರ ಹಣ ಹೊಂದಿಸುವುದು ಸ್ವಲ್ಪ ಕಷ್ಟದಾಯಕವೇ!, ಸದ್ಯಕ್ಕಂತೂ ಕೃತಕ ಕಾಲ ಹಾಕಿಸುವ ವಿಚಾರ ಕೈಬಿಟ್ಟಿರುವೆ.
“ನಿಂದೆ ಅಪಮಾನಗಳು ಯಾರನ್ನೂ ಬಿಟ್ಟಿವಢ ಹೇಳಿ?. ನನ್ನ ಈ ಸಂಕಷ್ದ ಸ್ಥಿತಿಯಲ್ಲಿಯೂ ಕೆಲವರು ನನ್ನನು ಟೀಕೆಮಾಡಿದ್ದಾರೆ.” ’ನೂರು ಜನ ನೂರು ಮಾತಾಡಲಿ, ಸಾವಿರ ಆರೋಪ ಮಾಡಲಿ, ಅದು ಅವರವರ ಜ್ಞಾನಮಟ್ಟ ಮತ್ತು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದೇ ಭಾವಿಸುತ್ತೇನೆ”. “ದುರ್ಬಲರು ವದಂತಿ ಹಬ್ಬಿಸುತ್ತಾರೆ. ದಡ್ಡರು ಅದನ್ನು ನಂಬುತ್ತಾರೆ. ಮೂರ್ಖರು ಅದನ್ನು ಹಂಚುತ್ತಾರೆ..! ನಿರಾಧಾರ ಆರೋಪ, ಅಸೂಯೆಪರ ಟೀಕೆ, ದುರುದ್ದೇಶಿತಪೂರಿತ ಇರಿತ ಇಷ್ಟೆಲ್ಲದ್ದರ ಮಧ್ಯ ನನ್ನೊಡನೆ ಆಪ್ತವಾಗಿ, ಬದ್ಧತೆಯಿಂದ ಹತ್ತಾರು ವರ್ಷಗಳು ಜೊತೆಗಿದ್ದು ಹತ್ತಿರದಿಂದ ಎಲ್ಲವನ್ನೂ ನೋಡುತ್ತಿರುವ ಪ್ರೀತಿಸುವ ಬೆಂಬಲಿಸುವ ಬೆನ್ನಿಗೆ ನಿಲ್ಲುವ ನೂರಾರು ನಿಷ್ಕಲ್ಮಶ ಮನಸ್ಸುಗಳಿವೆ”.
“ನನ್ನನ್ನು ಪೀತಿಸುವ , ಗೌರವಿಸುವ ಹಿರಿಯರ, ಕಿರಿಯರ, ಸ್ನೇಹಿತರ ಪ್ರೀತಿ ಬದುಕಿನಲ್ಲಿ ಭರವಸೆ ಹುಟ್ಟಿಸುವ ನಂಬಿಕೆಯ ಮಾತುಗಳು ನನ್ನಲ್ಲಿ ಆತ್ಮ ವಿಶ್ವಾಸ ಇಮ್ಮುಡಿಗೊಳಿಸಿವೆ”. ಬಂದಿರುವ ಕಡುಕಷ್ಟದ ನೋವನ್ನು ಅನುಭವಿಸಿಯು ಸಹ ಇನ್ನಷ್ಟು ಹಿಗ್ಗದೆ-ಕುಗ್ಗದೆ ಗಟ್ಟಿಯಾಗಿ ಜೀವನ ಕಟ್ಟಿಕೊಳ್ಳಲು, ಕತ್ತಲು, ಕಗ್ಗತ್ತಿಲಿನ ನಿಂದ ನೆಳಕಿನೆಡೆಗೆ ಬರಲು ಹಾತೊರೆಯುತ್ತಿರುವೆ. ನೀವುಗಳು ತೋರುತ್ತಿರುವ ಎದೆಯಾಳದ ಮಾತುಗಳಿಗೆ ಪ್ರೀತಿಗೆ ಅನಂತ, ಅನಂತ ನಮನಗಳು.
ಮಾಲತೇಶ ಅಂಗೂರ, ಹಾವೇರಿ.

