

ಶವ ಸಂಸ್ಕಾರ ಸೇವೆಯಲ್ಲಿ ಸಾರ್ಥಕತೆ ಕಂಡ ಷಣ್ಮುಖಯ್ಯ
ಹಾವೇರಿ : ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನಲ್ಲಿ ಯಾರೇ ಮೃತಪಟ್ಟರೂ ಅವರ ಶವದ ಸಂಸ್ಕಾರಕ್ಕೆ ಇವರೇ ಬೇಕು…!ಅವರೆ ಷಣ್ಮುಖಯ್ಯ ಕಿತ್ತೂರುಮಠ.
ಬದುಕಿದ್ದಾಗ ಜಾತಿ, ಧರ್ಮ, ಅಂತಸ್ತು ನಾನು, ನನ್ನದು ಎಂದು ಮೆರೆದ ದೇಹಗಳೆಲ್ಲ ಕೊನೆಗೆ ಬಂದು ತಲುಪುವ ಏಕೈಕ ತಾಣ ‘ರುದ್ರಭೂಮಿ’. ಶವ ಸಂಸ್ಕಾರಕ್ಕೆ ಬರುವ ಸಂಬಂಧಿಕರೇ ಶವ ಮುಟ್ಟಲು ಹೆದರಿ ದೂರ ನಿಂತು ಕಣ್ಣೀರು ಸುರಿಸುವ, ಹೆದರಿ ಕಾಲ್ಕಿಳುವ ಆ ಸ್ಮಶಾನದಲ್ಲಿ ಉರಿಯುವ ಚಿತೆಯ ಮುಂದೆ ನಿಂತು ಪ್ರತಿ ಆತ್ಮಕ್ಕೂ ಗೌರವದ ಮುಕ್ತಿ ನೀಡುವ ಅಭಯಹಸ್ತವೇ ಷಣ್ಮುಖಯ್ಯ ಕಿತ್ತೂರುಮಠ.
ಹಾವೇರಿ ಸಮೀಪದ ಜಂಗಮನಕೊಪ್ಪಗ್ರಾಮದ ಷಣ್ಮುಖಯ್ಯ ಕಳೆದ ೧೨ ವರ್ಷ
ಗಳಿಂದ ಹಾವೇರಿಯ ರುದ್ರಭೂಮಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸದ್ದಿಲ್ಲದೆ, ಶವಸಂಸ್ಕಾರದ ಕಾಯಕ ಮಾಡುತ್ತಿರುವ ಸರಳ ಬದುಕಿನ ಶ್ರಮಜೀವಿ ಈ ಷಣ್ಮುಖಯ್ಯ, ಬರಿ ಹೆಣ ಸುಡುವ ಆಳಲ್ಲ, ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ತಾಯಿ-ಮಗಳ ಶವಕ್ಕೂ ತಾವೇ ಅಗ್ನಿ ಸ್ಪರ್ಶ ಮಾಡಿದ ಧೀರ :
ಮನೆಯಲ್ಲಿ ಎಷ್ಟೇ ಶುಭ-ಸಮಾರಂಭಗಳಿರಲಿ, ಎಂಥದ್ದೇ ತುರ್ತು ಕೆಲಸವಿರಲಿ, ರುದ್ರಭೂಮಿಯಿಂದ ಕರೆ ಬಂದರೆ ಸಾಕು, ಶವಸಂಸ್ಕಾರಕ್ಕಾಗಿ ಸಮಯ ಕೊಡುವ ಇವರು ಎಲ್ಲವನ್ನೂ ಬದಿಗೊತ್ತಿ ಓಡುವ ಹೃದಯವಂತಿಕೆ ಇವರದ್ದು. ವಿಧಿಯಾಟ ಎಷ್ಟೊಂದು ಕ್ರೂರವೆಂದರೆ, ತಮ್ಮ ಕರುಳಿನ ಕುಡಿ ಮಗಳು ತೀರಿಕೊಂಡಾಗ, ಹೆತ್ತ ತಾಯಿ ಲೋಕ ತೊರೆದಾಗಲೂ ಕಣ್ಣೀರು ಒರೆಸಿಕೊಳ್ಳುತ್ತಲೇ, ಅದೇ ಕೈಗಳಿಂದ ಸ್ವಂತ ತಾಯಿ ಹಾಗೂ ಮಗಳ ಅಂತಿಮ ಸಂಸ್ಕಾರ ನೆರವೇರಿಸಿದ ಪ್ರಸಂಗ ಇವರ ಜೀವಮಾನದ ಅತಿದೊಡ್ಡ ಸ್ಪತ್ವ ಪರೀಕ್ಷೆಯಾಗಿತ್ತು. ‘ನನ್ನ ನೋವಿಗಿಂತ ಕಾಯಕವೇ ದೊಡ್ಡದು’ ಎಂದು ನಿಂತ ಆ ಕ್ಷಣಗಳು ಯಾವುದೇ ಕಲ್ಲು ಹೃದಯವನ್ನೂ ಕರಗಿಸುವಂಥದ್ದು!
ಕೊರೊನಾ ಭೀಕರತೆಯಲ್ಲೂ ಬೆಚ್ಚದ ಧೀರ: ಕೊರೋನಾ ಭೀಕರ ಸಮಯದಲ್ಲಿ ಇಡೀ ಜಗತ್ತೇ ಮರಣ ಮೃದಂಗಕ್ಕೆ ಬೆದರಿ, ಹೆತ್ತವರ ಹೆಣವನ್ನೂ ಮುಟ್ಟಲು ಅಂಜುತ್ತಿದ್ದ ಕೊರೊನಾ ಭೀಕರ ದಿನಗಳಲ್ಲಿ, ಪ್ರತಿದಿನ ೧೫ ರಿಂದ ೨೦ ಶವಗಳನ್ನು ತಮ್ಮ ಹೆಗಲ ಮೇಲೆ ಹೊತ್ತು ದಹನ ಕ್ರಿಯೆ ನೆರವೇರಿಸಿದ ಮಾನವತಾವಾದಿ ಇವರು.
“ಈ ಕೆಲಸ ಸಾಕು ಬಿಟ್ಟುಬಿಡು, ನಿನ್ನ ಪ್ರಾಣಕ್ಕೆ ಕಂಟಕ” ಎಂದು ಊರಿನವರು, ಹಿತೈಷಿಗಳು ಗೋಗರೆದು, ಊರಿಗೆ ಕಾಲು ಇಡಬೇಡ ಎಂದಾಗ “ನಾನು ಬಿಟ್ಟರೆ ಈ ದೇಹಗಳಿಗೆ ಮುಕ್ತಿ ಕೊಡುವವರಾರು?” ಎಂದು ತಮ್ಮ ಜೀವವನ್ನೇ ಪಣಕ್ಕಿಟ್ಟು ನಿಂತರು.
“ಇದು ಉದ್ಯೋಗವಲ್ಲ, ಮುಕ್ತಿಯ ಕಾ
ಯಕ”:
“ನಾನು ಮಾಡುವ ಈ ಕೆಲಸ ವ್ಯಾಪಾರವಲ್ಲ, ಇದು ಮುಕ್ತಿಯ ಕಾಯಕ, ಈಶ್ವರನ ಸೇವೆ. ಭಗವಂತ ನನಗೆ ಕೊಟ್ಟಿರುವ ಪವಿತ್ರ ಹೊಣೆಗಾರಿಕೆ” ಎನ್ನುವ ಷಣ್ಮುಖಯ್ಯನವರ ಮಾತುಗಳು ಇಂದಿನ ಸ್ವಾರ್ಥ
ಜಗತ್ತಿನ ಮುಖಕ್ಕೆ ಹಿಡಿದ ಕನ್ನಡಿಯಂತಿದೆ. ಈ ಪವಿತ್ರ ಸೇವೆಗೆ ದಾರಿ ತೋರಿಸಿದ ಈರಣ್ಣ ಗೋದಿ ಹಾಗೂ ಪ್ರತಿದಿನ ಈ ಕಾಯಕದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನೆರವಾಗುತ್ತಿರುವ ಅಳಿಯ ಮಂಜುನಾಥ ಅಡವಿಮಠ ಅವರ ಜೊತೆಗೂಡಿ, ಷಣ್ಮುಖಯ್ಯನವರು ಇಂದು ಸಮಾಜದ ಕಣ್ಣು ತೆರೆಸುವ ಮಾದರಿಯ ವ್ಯಕ್ತಿ ಯಾಗಿದ್ದಾರೆ.
ಜೀವನದ ಕೊನೆಯ ಹಂತದಲ್ಲಿ ಯಾರೂ ಇಲ್ಲದ ಅನಾಥಶವಗಳಿಗೆ ತಂದೆಯಾಗಿ, ಸಹೋದರನಾಗಿ, ಬಂಧುವಾಗಿ ನಿಂತು ಅಂತಿಮ ಸಂಸ್ಕಾರ ಮಾಡುವ ೫೬ವರ್ಷದ ಷಣ್ಮುಖಯ್ಯ ಕಿತ್ತೂರುಮಠ ಅವರು ಪತ್ನಿ, ಓರ್ವ ಪುತ್ರ, ಪುತ್ರಿ ಯೊಂದಿಗೆ ಕಡು ಬಡತನದಲ್ಲಿ ಜೀವನ ನಡೆಸುತ್ತಾ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ.ಇಂತಹ ತೆರೆಮರೆಯ ವಿಶಿಷ್ಟ ಸೇವಕರನ್ನು ಸಮಾಜ ಗುರುತಿಸಬೇಕಾಗಿದೆ.
ಏನೊ ಸಂತೃಪ್ತಿ: ಕಳೆದ ೧೩ ವರ್ಷ
ಗಳಿಂದ ನಿರಂತರವಾಗಿ ಈ ಸೇವೆ ಮಾಡಿಕೊಂಡು ಬಂದಿದ್ದೇನೆ. ಆತ್ಮತೃಪ್ತಿಗಾಗಿ ಈ ಕೆಲಸ ಎನ್ನುವ ಷಣ್ಮುಖಯ್ಯ ಪರಿಸರದಲ್ಲಿ ಏನೇ ಕಷ್ಟಕಾರ್ಪಣ್ಯ ಎದುರಾದರೂ ಇವರು ಮುಂದೆ ಬಂದು ನಿಲ್ಲುವ
ಜೀವನಗಾಥೆಯಿದು.
ಹಿತಮಿತ ಮಾತುಗಳ ಇವರ ಫಲಾಪೇಕ್ಷೆ ರಹಿತ ಈ ಸೇವೆಗಾಗಿ ಇವರು ಜನಮಾನಸದಲ್ಲಿ ಬೀರೂರಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳು ಇವರ ಸೇವೆ
ಗುರುತಿಸಿ ಗೌರವಿಸಬೇಕಿದೆ.
.
.
malatesh angur
sub-editor
kourava daily,
haveri
sub-editor
kourava daily,
haveri

