
ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣ
ಈ ಜಗತ್ತು ದೇವರನ್ನು ಕಾಣಲಾಗದಿದ್ದರೂ ದೇವರಂತೆ ಬಂದು ಸಮಾಜದ ಎಲ್ಲ ವರ್ಗದವರ ಆಗೂ- ಹೋಗುಗಳಗಳಿಗೆ ಸ್ಪಂದಿಸಿದ, ಸಮಸ್ಯೆಗಳನ್ನು ಬಿಡಿಸಲು ಯತ್ನಿಸಿದ ಮಾನವರಲ್ಲಿ ಮಾನವರಾಗಿದ್ದುಕೊಂಡು ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಿದ ಮಾನವ ಮಹಾದೇವರುಗಳನ್ನು ಕಂಡಿದೆ. ಬುದ್ಧ, ಏಸು, ಪೈಗಂಬರ, ಮಹಾವೀರ, ಗುರುನಾನಕ್, ಕಾರ್ಲ್ ಮಾರ್ಕ್ಸ್, ಲೆನಿನ್, ಗಾಂಧೀಜಿ ಮುಂತಾದವರೇ ಈ ಮನು ಕುಲದ ಮಾರ್ಗದರ್ಶಕರು. ಇವರೇ ದಾರ್ಶನಿಕರು, ಇವರು ಕಾಣದ ಯಾವುದೋ ಲೋಕದಿಂದ ಇಳಿದು ಬಂದವರಲ್ಲ, ಮಾನವರಾಗಿ ಹುಟ್ಟಿ ಮಹಾ ಮಾನವೀಯತೆಯ ಸ್ಥಿತಿಯನ್ನು ತಲುಪಿದವರು. ಇಂಥವರ ಮಾಲಿಕೆಯಲ್ಲಿ ಮಿಂಚುವ ಮತ್ತೊಂದು ಮಾಣಿಕ್ಯವೆಂದರೆ ೧೨ನೇ ಶತಮಾನದ ಬಸವಣ್ಣನವರು.
ಕಾಯಕ ತತ್ವದ ಕ್ರಾಂತಿ ಮಂತ್ರ ಪುರುಷ ಬಸವಣ್ಣ ಕಂಡ ನೆಲದಲ್ಲಿ ಉದ್ಭವಿಸಿದ ಸಹಸ್ರಮಾನ ಪುರು, ನವ ಸಮಾಜದ ಮುನ್ಸೂಚಕರಾಗಿದ್ದು, ಬಸವಣ್ಣನವರು ಭಾರತೀಯ ಸಮಾಜವನ್ನು ನೋಡಿದ ದೃಷ್ಟಿಕೋನ ವಿಶಿಷ್ಟವಾದುದು, ಅವರು ಎಲ್ಲವನ್ನು ತ್ಯಾಗ ಮಾಡುತ್ತಾ ತಮ್ಮ ನಡೆ-ನುಡಿಗಳಲ್ಲಿ ಏಕತೆ ಸಾಧಿಸುವುದರ ಮೂಲಕ ಜಗಜ್ಯೋತಿಯಾದರು.
ತನ್ನೊಳಗಿನ ಕುರುಕ್ಷೇತ್ರದಲ್ಲಿ ಹೋರಾಡುತ್ತ ಎಲ್ಲಾ ತೆರನಾದ ವೈರಿಗಳನ್ನು ನಾಶ ಮಾಡುತ್ತಾ ಅರಿಹಂತರಾದರು, ಆ ಮೂಲಕ ಧರ್ಮಯುದ್ಧವು ಮನುಷ್ಯನ ಒಳಗಡೆ ನಡೆಯುವಂತಹದ್ದು ಎಂದು ತೋರಿಸಿ ಕೊಟ್ಟರು, ಜಗತ್ತಿಗೆ ಯಾರೇ ಬೆಳಕಾಗಿರಲಿ ಏಷಿಯಾ ಖಂಡಕ್ಕೆ ಮತ್ತಿನ್ಯಾರೇ ಬೆಳಕಿರಲಿ, ಆದರೆ ಭಾರತಕ್ಕೆ ಬಸವಣ್ಣನವರೇ ಮಹಾ ಬೆಳಕು.
ಬಸವಣ್ಣನವರು ಒಂದು ರೀತಿಯಲ್ಲಿ ವಚನ ಚಳುವಳಿಯ ಅಧಿಕೃತ ವಕ್ತಾರನೆಂದು ಕರೆಯುವ ಮಟ್ಟಿಗೆ ಅದರ ಧೋರಣೆಗಳ ಬಗ್ಗೆ ವಚನಗಳಲ್ಲಿ ಹೇಳಿದ್ದಾನೆ. “ನನಗಿಂತ ಕಿರಿಯರಿಲ್ಲ” ಎಂದು ಹೇಳಿಕೊಳ್ಳುವಷ್ಟು ವಿನೀತ ಭಾವವನ್ನು ತೋರ್ಪಡಿಸಿಕೊಳ್ಳುವ ಹಾಗೆಯೇ “ಆರು ಮುನಿದು ನಮ್ಮ ನೀನು ಮಾಡುವರು ಊರು ಮುನಿದು ನಮ್ಮನೆಂತು ಮಾಡುವರು” ಎಂಬಷ್ಟು ಮಟ್ಟಿಗೆ ಸೆಟೆದು ನಿಲ್ಲಬಲ್ಲ. “ಅಯ್ಯಾ ನಿಮ್ಮ ವಂಶಾವಳಿಯಲು ಒಬ್ಬ ತುತ್ತಿನ ಮಗ ಹುಟ್ಟಿದ ಆತನ ಮಗ ನಾನಯ್ಯ” ಎಂದು ಹೇಳುವಾಗ ವಿನಮ್ರತೆ ತೋರುವಂತೆಯೇ “ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ” ಎಂದು ಚುಚ್ಚಿ ಮಾತನಾಡಬಲ್ಲ ಬಸವಣ್ಣ.
ಬಸವಣ್ಣ ಜನ್ಮದಾರಣೆ ಮಾಡಿದಾಗ ಕರ್ನಾಟಕ ದ ರಾಜಕೀಯ ಕ್ಷೇತ್ರ ಕ್ಷೆಭೆಯ ದವಡಿಯಲ್ಲಿ ಸಿಕ್ಕಿಕೊಂಡು ನರಳುತ್ತಿತ್ತು. ರಾಜ್ಯ ಲೋಭಕ್ಕಾಗಿ, ಅಧಿಕಾರ ಲಾಭಕ್ಕಾಗಿ ಸಾಮಂತ ರಾಜರು ಸಂಚು-ಹೊಂಚುಗಳಲ್ಲಿ ಆಸಕ್ತರಾಗಿ ಜನತೆಯ ಕ್ಷೇಮವನ್ನು ನಿರ್ಲಕ್ಷಿಸಿದ್ದರು. ವೃತ್ತಿಭೇದ, ಜಾತಿಭೇದಗಳಿಂದಾಗಿ ಸಾಮಾನ್ಯ ಜನತೆಯಲ್ಲಿ ಗುಂಪುಗಳು ಬೆಳೆದು ಅನೈಕ್ಯ ಉಲ್ಬಣಿಸಿ ಅಸಮಾನತೆಯ ಅಸಹ್ಯವಾಗಿ ಸಮಾಜ ದುರ್ಬಲವಾಗಿತ್ತು. ರಾಜಕೀಯ ಕ್ಷೆಭೆ, ಧಾರ್ಮಿಕ ಅವನತಿ ಮತ್ತು ಸಾಮಾಜಿಕ ಕ್ಷೆಭೆಗಳು ವಿಷಮ ಸ್ಥಿತಿಯನ್ನು ಮುಟ್ಟಿದಾಗ, ದೇವರ ದಯೆಯೇ ಅವತರಿಸಿದಂತೆ ಬಸವಣ್ಣನವರು ಲೋಕ ರಕ್ಷಕರಾಗಿ ಸಮಾಜಕ್ಕೆ ಸಂಜೀವಿನಿಯಾಗಿ ಜನಿಸುತ್ತಾರೆ.
ಇಷ್ಟ ಲಿಂಗೋಪಾಸಕನಿಗೆ ಪ್ರಾಶಸ್ತ್ಯ ನೀಡಿ ಜಾತೀಯತೆ, ಅಸ್ಪೃಶ್ಯತೆಗಳ ಬುಡವನ್ನು ಸಡಿಲಗೊಳಿಸಿ ಸ್ತ್ರೀ ಸಮುದಾಯಕ್ಕೆ ಜಗತ್ತಿನಲ್ಲಿಯೇ ಮೊಟ್ಟಮೊದಲ ಸ್ವಾತಂತ್ರ್ಯ ಸಮಾನತೆಗಳ ಹಕ್ಕು ಒದಗಿಸಿದರು. ಕಾಯಕ-ದಾಸೋಹಗಳ ಮೂಲಕ ವೃತ್ತಿ ಸಾರವನ್ನು ಆರ್ಥಿಕ ಪ್ರಗತಿಯನ್ನು ಸಂಪತ್ತಿನ ಸಮಾನ ವಿನಯೋಗವನ್ನು ಸಾಧಿಸಿದರು. ಮೇಲು-ಕೀಳುಗಳ ಭೇದಗಳನ್ನೊರಸಿ ಸಾಮಾಜಿಕ ಭದ್ರತೆಗೂ, ರಾಜಕೀಯ ಶಾಂತಿಗೂ ಅಸ್ತಿಭಾರ ಹಾಕಿದರು. ೧೯-೨೦ನೇ ಶತಮಾನಗಳಲ್ಲಿ ನಡೆದಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ವಿಚಾರಧಾರೆಗೆ ಮುನ್ನುಡಿ ಎಂಬಂತೆ ಅವರು ಅನೇಕ ಪ್ರಯೋಗಗಳನ್ನು ನಡೆಸುತ್ತಾರೆ. ಕರ್ನಾಟಕದಲ್ಲಿರಲಿ, ಭರತ ಖಂಡದಲ್ಲಿಯೇ ಏಕೆ ಇಡೀ ಜಗತ್ತಿನಲ್ಲಿಯೇ ಸಮಗ್ರ ಕ್ರಾಂತಿಯ ಅದ್ವೈರ್ಯ ಆ ಕಾಲಕ್ಕೆ ಹುಟ್ಟಿರಲಿಲ್ಲ ಎಂದೇ ಹೇಳಬಹುದು.
ಬಸವಪ್ರಜ್ಞೆ : ಬಸವಪ್ರಜ್ಞೆ ಎಂದರೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಪ್ರಜ್ಞೆ. ಈ ಸಮಾಜವನ್ನು ಎಲ್ಲ ರೀತಿಯಿಂದಲೂ ಮಾನವೀಯಗೊಳಿಸುವ ಪ್ರಜ್ಞೆ ಬಸವಪ್ರಜ್ಞೆ ಎಂದರೆ ಮನು ಧರ್ಮವನ್ನು ಬಿಟ್ಟು ಮಾನವ ಧರ್ಮ ಸ್ವೀಕರಿಸುವುದು, ನಮ್ಮ ತಪ್ಪುಗಳನ್ನು ನಾವೇ ಬಹಿರಂಗಪಡಿಸುವುದು, ಅಹಂಕಾರ ನಾಶ ಮಾಡುವುದು, ಬಸವಪ್ರಜ್ಞೆ ಎಂದರೆ “ಕೇಡಿಲ್ಲದ, ಸುಲಿಗೆ ಇಲ್ಲದ ಸಮಾಜದ ಬಗ್ಗೆ ಚಿಂತಿಸುವುದು” ಎಲ್ಲ ಸಂಸ್ಕೃತಿ-ನಾಗರೀಕತೆ ಮತ್ತು ಧರ್ಮಗಳ ವಿಚಾರಗಳಲ್ಲಿನ ವೈವಿಧ್ಯದಲ್ಲಿ ಏಕತೆಯನ್ನು ಹುಡುಕುವ ಪ್ರಜಾಪ್ರಭುತ್ವವಾದಿ ಪ್ರಜ್ಞೆಯೇ ಬಸವ ಪ್ರಜ್ಞೆ .
ಅನುಭವ ಮಂಟಪ: ಬಸವಣ್ಣನವರ ಅನುಭವ ಮಂಟಪ ದುಡಿಯುವ ಜನರ ಮೊದಲ ವಿಶ್ವವಿದ್ಯಾಲಯ, ಶರಣರು ಧಾರ್ಮಿಕ ವಿಚಾರಗಳನ್ನು ಚರ್ಚಿಸುತ್ತಿದ್ದರು. ಅನುಭವಿಗಳ ಚಿಂತನೆ ಕೇಂದ್ರ ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲ ಶಿವಶರಣರಿಗೂ ಮುಕ್ತ ಅವಕಾಶವಿತ್ತು. ಅರುವಿನ ವಿಸ್ತಾರಕ್ಕಾಗಿಯೇ ಕಾಯಕ ಜೀವಿಗಳು ಇಲ್ಲಿ ಸೇರುತ್ತಿದ್ದರು. ಸಮೂಹ ಜ್ಞಾನದಿಂದ ಮಾತ್ರ ಮಾನವ ಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲ ವಚನಕಾರರ ವಚನಗಳು ಅನುಭವ ಮಂಟಪದ ಚಿಂತನ-ಮಂಥನ ಮೂಸೆಯಲ್ಲಿ ಹಾದು ಬಂದು ವೈಚಾರಿಕ ವಜ್ರಗಳಾದವು. ಈ ರೀತಿಯಲ್ಲಿ ಅನುಭವ ಮಂಟಪವು ವಚನ ಚಳುವಳಿಗೆ ಕಾರಣವಾಯಿತು. ಶರಣರು ಬಹುದೊಡ್ಡ ಸಾಮಾಜಿಕ ಸಾಧನೆ ಎಂದರೆ ಅನುಭವ ಮಂಟಪದ ಚಿಂತನೆಯಲ್ಲಿ ಮಾನವ ಹಕ್ಕುಗಳನ್ನು ಗುರುತಿಸಿ ಶರಣ ಸಂಕುಲದಲ್ಲಿ ಕಾರ್ಯಗತಗೊಳಿಸಿದ್ದು. ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳು ಬಸವಣ್ಣನವರ ವಚನಗಳಲ್ಲಿವೆ.
ತತ್ವಾಚರಣೆಯ ಅಗತ್ಯ: ನಾವು ಪ್ರತಿವರ್ಷ ಬಸವ ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ, ಅದೊಂದು ವಾರ್ಷಿಕ ಮತಾಚರಣೆಯಾಗಿದೆ. ಆಚರಣೆಗೆ ಬಸವಣ್ಣನವರ ಭಾವಚಿತ್ರ ಇಟ್ಟು ಪೂಜಿಸುತ್ತೇವೆ. ಆದರೆ ಅವನ ತತ್ವಚರಣೆಯ ಸತ್ಯ ಜ್ಞಾನ ನಮಗಿಲ್ಲ. ಅವನ ಭಾವಚಿತ್ರದ ಕಣ್ಣುಸುವ ಅರಿವಿನ ಬೆಳಕು ನಮಗೆ ಅರ್ಥವಾಗಿಲ್ಲ. ಅವನನ್ನು ಹಾಡಿ ಹೊಗಳುವ ನುಡಿ ಜಾಣ್ಮಗೇನು ಕೊರತೆ ಇಲ್ಲ. ತುದಿ ನಾಲಿಗೆ ಕಸ್ತೂರಿ, ಹೃದಯ ಕತ್ತರಿ. ಆತ್ಮ ನಿರೀಕ್ಷೆ ಮಾಡಿಕೊಳ್ಳಬೇಕು. ನಾವು ಶರಣ ಸಂಸ್ಕೃತಿಯ ವಾರಸುದಾರರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತವೆ. ಆದರೆ ತನು ಮನ, ಧನ ಹಿಂದಿಟ್ಟುಕೊಂಡು ಮಾತಿನ ಬಣವೆಯ ಮುಂದಿಟ್ಟುಕೊಂಡು ನಡೆಯುತ್ತೇವೆ. “ಹಸಿದು ಬಂದ ಗಂಡಂಗೆ ಊಣಲಿಕ್ಕದೆ ಬಡೆವಾದನೆಂದು” ಮರಗುತ್ತೇವೆ. ನಮ್ಮ ನಮ್ಮ ಮನವ ಸಂತೈಸಿಕೊಳ್ಳದೆ ಲೋಕದ ಡೊಂಕ ತಿದ್ದ ಲೆತ್ನಿಸುತ್ತೇವೆ. ನಮ್ಮದು ಎಂದು ಹೇಳುತ್ತಲೇ ನಮಗೆ ನಾವೇ ಪರಸ್ಪರ ದೂರಿ ಕೊಳ್ಳುತ್ತೇವೆ. ನಮ್ಮನ್ನು ನಾವೇ ಮಾರಿಕೊಳ್ಳುತ್ತೇವೆ. “ಮಣ್ಣು ಬೊಂಬೆಯನ್ನು ತೊಳೆದು ಕೆಸರು ಕಳೆಯುವ” ಸಾಹಸ ನಮ್ಮದಾಗಿದೆ/
“ಅಂಗದ ಮೇಲೆ ಲಿಂಗವಿದ್ದವರನ್ನೆಲ್ಲ ಒಂದೇ ಎಂಬೆ” ಎಂಬ ಅಣ್ಣನ ಮಾತನ್ನು ಮಣ್ಣುಗೂಡಿಸಿದ್ದೇವೆ. “ನಮಗೆ ನಾವೇ ಮುನಿಯುತ್ತಿದ್ದೇವೆ, ಮನೆಯೊಳಗಣ ಕಿಚ್ಚು ಮನೆಯ ಸುಡುವುದೆಂಬ ಅರಿವೆಯೂ ನಮಗಿಲ”. “ಮತಿಯಿಲ್ಲದ ನಳರಾಗಿದ್ದೇವೆ, ಭಕ್ತಿ ಯಿಲ್ಲದ ಬಡವರಾಗಿದ್ದೇವೆ”. ಮನಕ್ಕೆ ಮಾತಿನ ನಾಚಿಕೆ ಯಿಲ. ಮಾತಿಗೆ ಮನದ ನಾಚಿಕೆ ಇಲ್ಲ? ಕಂಬಳಿಯಲ್ಲಿ ಕಣಕನಾದುವ ಕೆಲಸ ನಡೆದೇ ಇದೆ. “ಲೋಕೋಪಚಾರಕ್ಕೆ ಮಜ್ಜನ ಕರೆಯುವ ಲಾಂಛನ ಮನದ ಕಸ ತೊಳೆದಿಲ್ಲ”, “ಒಳಗೆ ಕುಟಿಲ, ಹೊರಗೆ ವಿನಯ”, ವ್ಯಕ್ತಿ ಪ್ರತಿಷ್ಠೆ ಸಮಾಜ ದೇಗುಲದ ಕಳಶವಾಗಿದೆ.
ಅಣ್ಣ ಬಸವಣ್ಣನ ಕಣ್ಣು ಸೂಚಿಸುತ್ತದೆ “ಅರಿದರೆ ಶರಣ ಮರೆತಡೆ ಮಾನವ”, ಆದ ಕಾರಣ “ನಮ್ಮ ಮದವಳಿದು ನಿಜವಳಿಯಬೇಕು” “ಕಾಯಕ ವಂಚಕರಾಗಬಾರದು”. “ಜೀವ ವಂಚಕ ರಾಗಬಾರದು”. “ಸುಖಕ್ಕೆ ತುಂಬಿದ ದೀವಿಗೆ” “ಮನೆಯನ್ನೆಲ್ಲ ಸುಡುವಂತಾಗಬಾರದು”. “ನಮ್ಮಲ್ಲಿ ಸತ್ಯವಿದೆ, ಸಮಾಧಾನವಿದೆ”, “ಅದು ಮನಕ್ಕೆ ಬಾರದಿದ್ದರೆ” ಹೇಗೆ? ನಮ್ಮದು “ಮರಳು ತರ ಹರಳು ತಲೆ ಆಗಬಾರದು”. “ಬಸವಣ್ಣನನ್ನು ಪವಾಡ ಪುರುಷರನ್ನಾಗಿ ವೈಭೀಕರಿಸಿ ಅನ್ಯಾಯ ಮಾಡಬೇಕಿಲ್ಲ”, ಅರ್ಥಮಾಡಿಕೊಳ್ಳಬೇಕಾಗಿದೆ. “ಬಸವ ಜಯಂತಿ ಆಚರಣೆ ಮಾಡುವುದು ಎಂದರೆ ಕೇವಲ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ಮಾಡುವುದಲ್ಲ, ಅವರ “ವಿಚಾರಗಳ ಮೆರವಣಿಗೆ ಆಗಬೇಕು”. “ಆ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಬೇಕು”. ಆಗ ಬಸವ ಜಯಂತಿಗೆ ಅರ್ಥ ಬರುವುದು. ಅವರ ಹೋರಾಟದ ಬದುಕು ಸಾರ್ಥಕವಾಗುತ್ತz.
“ಓದಿ ಪರಿಶುದ್ಧನಾಗು
ದುಡಿದು ಪ್ರಸಾದಿ ಯಾಗು
ಪಡೆದು ದಾಸೋಹಿಯಾಗು
ಇದೇ ನಿನ್ನ ಹಾಗೂ ಹೋಗು
ಬೇರೆ ಯಾಕೆ ಬೇಕು ಸೋಗು?
ಮೊದಲು ಬಸವನಾಗು,ಮಾನವನಾಗಿ ಸಾಗು”
-ರಾಮಜಾದವ
(೧೨ನೇ ಶತಮಾನದಲ್ಲಿಯೇ ಬದುಕಿನ ಪ್ರತಿಯೊಂದು ರಂಗದಲ್ಲೂ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಆಧ್ಯಾತ್ಮ ಬಾನಂಗಳದ ಬೆಳ್ಳಿಚುಕ್ಕಿ ಬಸವಣ್ಣ. ಇದೇ ಎಪ್ರೀಲ್ ೨೦ರಂದು ಭಕ್ತಿ ಭಂಡಾರಿ ಎಂದೇ ಹೆಸರಾದ ಬಸವೇಶ್ವರರ ಜಯಂತಿ, ಕಾಯಕದ ದಿನ, ತನ್ನಮಿತ್ಯ ಈ ಕಿರು ಲೇಖನ.)

ಹನುಮಂತಗೌಡ ಗೊಲ್ಲರ
ಸಾಹಿತಿಗಳು, ಹಾವೇರಿ.

